ವಿಜೇತ ತಂಡಗಳಿಗೆ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಬಹುಮಾನ ವಿತರಿಸಿದರು. ಪ್ರಮುಖರಾದ ರತ್ನಕುಮಾರ್, ಪಿ.ಶ್ರೀನಿವಾಸ ತಂತ್ರಿ, ಡಾ.ರಾಧಾಕೃಷ್ಣ ಎಸ್.ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ಕಲಿಕೆ ನಿರಂತರವಾಗಿ ಹರಿಯುತ್ತಿರಬೇಕು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕಲಿಕೆ ಎಂದಿಗೂ ನಿಲ್ಲದ ಪ್ರಕ್ರಿಯೆಯಾಗಿರಬೇಕು ಎಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ-2026 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿದರು. ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್ ಮತ್ತಿತರರಿದ್ದರು.
ಸಂಸ್ಥೆ ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಸ್ವಾಗತಿಸಿದರು. ಕಾಲೇಜಿನ ತಾಂತ್ರಿಕ ಕಾರ್ಯಕ್ರಮಗಳ ಸಂಯೋಜಕಿ ಡಾ.ರೆನಿಟಾ ಶರೋನ್ ಮೋನಿಸ್ ವರದಿ ವಾಚಿಸಿದರು. ಪ್ರಾಧ್ಯಾಪಕ ರಾಘವೇಂದ್ರ ಜಿ.ಎಸ್. ವಿವಿಧ ತಾಂತ್ರಿಕ- ಸಾಂಸ್ಕೃತಿಕ ಮತ್ತು ಮ್ಯಾನೇಜ್‌ಮೆಂಟ್ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷ ಸಿಂಚನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಸ್ಪರ್ಧಾ ವಿಜೇತರಿಗೆ ಬಹುಮಾನ
ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿವಮೊಗ್ಗದ ಜವಹಾರ್‌ಲಾಲ್ ನೆಹರು ನ್ಯೂ ತಾಂತ್ರಿಕ ಕಾಲೇಜು ವರ್ಣೋತ್ಸವ- 2026 ಚಾಂಪಿಯನ್‌ಷಿಪ್ ಬಹುಮಾನ, ಮೂಡುಬಿದಿರೆ ಮಂಗಳೂರು ತಾಂತ್ರಿಕ ಮಹಾವಿದ್ಯಾಲಯ ರನ್ನರ್ಸ್ ಅಪ್ ಬಹುಮಾನ ಪಡೆಯಿತು. ತಾಂತ್ರಿಕ ಸ್ಪರ್ಧೆ ಚಾಂಪಿಯನ್‌ಷಿಪ್ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಎನ್.ಎಂ.ಎ.ಎಂ.ಐ.ಟಿ ನಿಟ್ಟೆ ಪಡೆಯಿತು.