ಉಡುಪಿ ಜಿಲ್ಲಾ ಮಟ್ಟದ ಕಲ್ಪಿತ ಯುವಸಂಸತ್​ಗೆ ಆಯ್ಕೆಯಾದ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜ್​ನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರೊ. ಡಾ.ಸುರೇಖಾ ಕೆ., ಡಾ.ಪ್ರೀತಿ ಹರೀಶರಾಜ್​, ಡಾ.ನವೀನಚಂದ್ರ, ಡಾ.ಜಯಮೋಲ್​ ಪಿ.ಎಸ್​. ಇತರರಿದ್ದರು. 
ಉಡುಪಿ

ಕಲ್ಪಿತ ಯುವ ಸಂಸತ್​ನಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ

* ಪ್ರಾಂಶುಪಾಲೆ ಡಾ.ಸುರೇಖಾ ಕೆ. ಅಭಿಪ್ರಾಯ

* ವೈಕುಂಠ ಬಾಳಿಗಾ ಕಾನೂನು ಕಾಲೇಜ್​ ಜಿಲ್ಲಾಮಟ್ಟಕ್ಕೆ ಆಯ್ಕೆ

ಉಡುಪಿ: ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ, ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಅರಿತುಕೊಳ್ಳಲು ಕಲ್ಪಿತ ಯುವ ಸಂಸತ್​ ಉತ್ತಮ ವೇದಿಕೆಯಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ, ವಾಕ್ಚಾತುರ್ಯ, ವಿಷಯ ಮಂಡನೆಯ ಕೌಶಲ, ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜ್​ನ ಪ್ರಾಂಶುಪಾಲೆ ಡಾ.ಸುರೇಖಾ ಕೆ. ಅಭಿಪ್ರಾಯಪಟ್ಟರು.

ಉಡುಪಿ ಮತ್ತು ಕಾರ್ಕಳ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಕಾನೂನು ಇಲಾಖೆ, ತಾಪಂ ವತಿಯಿಂದ ಕಾಲೇಜ್​ನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲ್ಪಿತ ಯುವ ಸಂಸತ್​ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಕಲ್ಪಿತ ಯುವಸಂಸತ್​ ಸ್ಪರ್ಧೆಯ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ತಾವುಗಳು ರಾಜ್ಯಮಟ್ಟಕ್ಕೂ ಆಯ್ಕೆಯಾಗಿ ಗೆಲುವು ಸಾಧಿಸಿ ಕಾಲೇಜ್​ನ ಕೀರ್ತಿ ಹೆಚ್ಚಿಸಬೇಕು. ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕು ಎಂದರು.

ಕಾಲೇಜ್​ನ ಉಪಪ್ರಾಂಶುಪಾಲೆ ಡಾ.ಪ್ರೀತಿ ಹರೀಶರಾಜ್​, ಪ್ರಾಧ್ಯಾಪಕರಾದ ಡಾ.ನವೀನಚಂದ್ರ, ಡಾ.ಜಯಮೋಲ್​ ಪಿ.ಎಸ್​. ಉಪಸ್ಥಿತರಿದ್ದರು.

ಕಾರ್ಕಳ ಹಾಗೂ ಉಡುಪಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಮಾತುಗಾರರಾಗಿ ಆಯ್ಕೆಯಾದ ವಿದ್ಯಾರ್ಥಿಗಳಾದ ದೀಪಕ ಕಾಮತ ಎಳ್ಳಾರೆ, ಸುಮಂತ, ಲಕ್ಷ್ಮೀಕಾಂತ, ವಸುದೇವ ತಿಲಕ್​, ಗಣೇಶ ಶ್ಯಾನುಭಾಗ, ವಿನ್ಯಾಸ ಪೈ, ಗಣೇಶ ಭಟ್ಟ ಪ್ರಶಸ್ತಿ ಸ್ವೀಕರಿಸಿದರು.