ಲಾವಂತಬೆಟ್ಟು ರಸ್ತೆಯಲ್ಲಿನ ಹೊಂಡ, ಚರಂಡಿ ಸಮಸ್ಯೆ ಹಾಗೂ ಕೊಳಚೆ ನೀರಿನ ಪರಿಸ್ಥಿತಿ.
ಯಶೋಧರ ವಿ.ಬಂಗೇರ ಮೂಡುಬಿದಿರೆ
ಮೂಡುಬಿದಿರೆ: ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ಲಾವಂತಬೆಟ್ಟು ರಸ್ತೆ ಮೂಲಸೌಕರ್ಯದ ಕೊರತೆಯಿಂದ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಮಳೆ ಹಾಗೂ ಕೊಳಚೆ ನೀರು ರಸ್ತೆಯಲ್ಲೇ ಹರಿಯುವುದು, ಚರಂಡಿಗಳಲ್ಲಿ ಹೂಳು ತುಂಬಿರುವುದು, ರಸ್ತೆಯಲ್ಲಿನ ಹೊಂಡ-ಕೆಸರು, ತ್ಯಾಜ್ಯ ಎಸೆಯುವುದು ಹಾಗೂ ಅಸಮರ್ಪಕ ವಾಹನ ನಿಲುಗಡೆಯಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಚರಂಡಿಯೇ ದೊಡ್ಡ ಸಮಸ್ಯೆ
ಸರ್ಕಾರಿ ಆಸ್ಪತ್ರೆ ಬಳಿಯ ಚರ್ಚ್ ರಸ್ತೆಯಿಂದ ಅಮರಶ್ರೀ ಟಾಕೀಸು ಮುಂದಾಗಿ ಶ್ರೀ ಹನುಮಂತ ದೇವಸ್ಥಾನದ ಮುಖ್ಯರಸ್ತೆಯನ್ನು ಸೇರುವ ಲಾವಂತಬೆಟ್ಟು ರಸ್ತೆಯ ಹಲವು ಕಡೆ ಚರಂಡಿಯೇ ಇಲ್ಲ. ಇರುವ ಚರಂಡಿಯಲ್ಲೂ ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ಮಡುಗಟ್ಟುತ್ತಿದೆ. ವಸತಿ ಸಂಕೀರ್ಣಗಳಿಂದ ಚರಂಡಿಗೆ ಬಿಡುವ ನೀರು ಹಾಗೂ ಮಳೆ ನೀರು ರಸ್ತೆಯತ್ತ ಹರಿಯುವುದರಿಂದ ಕೊಳಚೆ ನೀರಿನ ಸಮಸ್ಯೆ ಉಂಟಾಗಿದೆ. ದುರ್ವಾಸನೆಯ ಜತೆಗೆ ವಾಹನಗಳು ಸಂಚರಿಸುವಾಗ ನಿಂತ ನೀರು ಸವಾರರು ಹಾಗೂ ಪಾದಚಾರಿಗಳ ಮೇಲೆ ಸಿಂಚನವಾಗುವ ಪರಿಸ್ಥಿತಿಯಿದೆ.
ತ್ಯಾಜ್ಯಕ್ಕೂ ಕಡಿವಾಣವಿಲ್ಲ
ರಸ್ತೆಯ ಬದಿಗಳಲ್ಲಿ ಖಾಲಿ ಹಾಗೂ ಒಡೆದ ಬಾಟಲಿ ಸೇರಿದಂತೆ ತ್ಯಾಜ್ಯ ಎಸೆಯಲಾಗುತ್ತಿದೆ. ಕೆಲವರು ತ್ಯಾಜ್ಯವನ್ನು ಕಟ್ಟಿ ರಸ್ತೆಯ ಅಕ್ಕಪಕ್ಕದಲ್ಲಿ ಬಿಸಾಡುತ್ತಿದ್ದಾರೆ. ಬೀದಿನಾಯಿಗಳು ತ್ಯಾಜ್ಯವನ್ನು ಹರಿದು ರಸ್ತೆಯಂಚಿನಲ್ಲಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ಇದರಿಂದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕವಿದೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
ಚರಂಡಿ ಸ್ವಚ್ಛಗೊಳಿಸಿ ಅಗತ್ಯವಿರುವ ಕಡೆ ಹೊಸ ಚರಂಡಿ ನಿರ್ಮಿಸುವುದು, ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಳ್ಳುವುದು, ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವುದು ಹಾಗೂ ಅಸಮರ್ಪಕ ಪಾರ್ಕಿಂಗ್ ನಿಯಂತ್ರಿಸುವುದು ಅಗತ್ಯವಾಗಿದೆ. ತಾತ್ಕಾಲಿಕ ಕ್ರಮಗಳ ಬದಲು ಸಮಸ್ಯೆಯ ಮೂಲ ಕಾರಣಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಅಸಮರ್ಪಕವಾಗಿ ನಿಲುಗಡೆ ಮಾಡುವುದರಿಂದ ರಸ್ತೆಯ ಅಗಲ ಕಡಿಮೆಯಾಗುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಜನ ಹಾಗೂ ವಾಹನ ಸಂಚಾರ ಹೆಚ್ಚಿರುವ ಸಂದರ್ಭಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ. ಹಲವು ಪ್ರಮುಖ ಸ್ಥಳಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಕೇವಲ ರಸ್ತೆ ದುರಸ್ತಿ ಮಾತ್ರವಲ್ಲದೆ, ಸಮಗ್ರ ಚರಂಡಿ ವ್ಯವಸ್ಥೆ, ಕೊಳಚೆ ನೀರಿನ ಸಮರ್ಪಕ ವಿಲೇವಾರಿ, ತ್ಯಾಜ್ಯ ನಿಯಂತ್ರಣ ಹಾಗೂ ಪಾಕಿರ್ಂಗ್ ವ್ಯವಸ್ಥೆಗೂ ಪರಿಹಾರ ಕಂಡುಕೊಳ್ಳಬೇಕಿದೆ.
ಲಾವಂತಬೆಟ್ಟು ರಸ್ತೆ ಹಲವು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತದೆ. ಚರಂಡಿ ವ್ಯವಸ್ಥೆ ಸರಿಪಡಿಸಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಹಾಗೂ ಅಸಮರ್ಪಕ ಪಾರ್ಕಿಂಗ್‌ಗೂ ಕಡಿವಾಣ ಹಾಕಿ, ರಸ್ತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.