ಆಳ್ವಾಸ್‌ನಲ್ಲಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರಸಂಕಿರಣವನ್ನು ಡಾ.ಡಿ.ವಿ ಪರಮಶಿವಮೂರ್ತಿ ಉದ್ಘಾಟಿಸಿದರು. ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಮಾಧವ ಪೆರಾಜೆ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬಂಧಗಳನ್ನು ಬೆಸೆಯುವ ಪ್ರಮುಖ ಸಾಧನ. ಭಾಷೆಗಳು ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಸಂಘರ್ಷಕ್ಕೆ ದಾರಿಯಾಗಬಾರದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಂಪಿ ಕನ್ನಡ ವಿವಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಆಶ್ರಯದಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಚಾರ ಸಂಕಿರಣದ ಸಂಚಾಲಕ, ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ ವಿಚಾರ ಸಂಕಿರಣದ ಉದ್ದೇಶಗಳು ಹಾಗೂ ಸಮಕಾಲೀನ ಮಹತ್ವವನ್ನು ವಿವರಿಸಿದರು.
ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಿ, ಭಾಷೆಗಳ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಹಳೆಯ ಅಂಕಿಅಂಶಗಳ ಮೇಲೆ ಅವಲಂಬಿತವಾಗಿರುವುದು ದುರಾದೃಷ್ಟಕರ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಆಳ್ವಾಸ್ ಕಾಲೇಜು ಪ್ರಾಚಾರ್ಯ ಡಾ.ಕುರಿಯನ್ ಉಪಸ್ಥಿತರಿದ್ದರು. ಆಳ್ವಾಸ್ ಕನ್ನಡ ವಿಭಾಗ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಸುಧಾರಾಣಿ ನಿರೂಪಿಸಿದರು.
ಪ್ರಮುಖರಿಂದ ಗೋಷ್ಠಿ
ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ ಕೇರಳದ ಬರಹಗಾರ ಡಾ.ಸುಧಾಕರ್ ರಾಮಂತಳಿ ಬಹುಭಾಷೆಗಳು ಹಾಗೂ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಅನನ್ಯತೆ ಕುರಿತು, ಡಾ.ವಿ.ಬಿ ತಾರಕೇಶ್ವರ, ದಕ್ಷಿಣ ಭಾರತದ ಭಾಷಾರಾಷ್ಟ್ರೀಯತೆಯ ಪರಿಕಲ್ಪನೆ, ಡಾ.ಡಿ.ಪಾಂಡುರಂಗ ಬಾಬು, ಜಾತಿ ವ್ಯವಸ್ಥೆ ಮತ್ತು ಭಾಷೆ: ಸಮಜೋ ಭಾಷಾ ವೈಜ್ಞಾನಿಕ ಚಿಂತನೆಗಳು, ಎರಡನೇ ಗೋಷ್ಠಿಯಲ್ಲಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲಿಷ್ ವಿಭಾಗ ಪ್ರಾಧ್ಯಾಪಕ ಡಾ ರಾಬರ್ಟ್ ಜೋಶ್- ಜಾಗತಿಕ ಮತ್ತು ಗ್ಲೊಕಲ್ ರಾಜಕರಣದ ನೆಲೆಗಳು, ಡಾ.ರೇಖಾ ದತ್ತ, ದಕ್ಷಿಣ ಭಾರತದ ಸ್ತ್ರೀವಾದಿ ಬರಹಗಳ’ ಕುರಿತು ಮಾತನಾಡಿದರು.