ಉಡುಪಿಯಲ್ಲಿ ಆಯೋಜಿಸಿದ್ದ ಕಾನೂನು-ಕಾಯಿದೆ ಅರಿವು ಕಾರ್ಯಾಗಾರವನ್ನು ಡಾ. ಪಿ.ವಿ. ಭಂಡಾರಿ ಉದ್ಘಾಟಿಸಿದರು. ಮಂಜುನಾಥ್​ ಎಸ್​., ಮಂಜುನಾಥ್​ ಹಿರೇಚೌಟಿ, ದೀಪಕ್​ ಸಿ.ಎನ್​., ವಿ.ಆರ್​. ಮರಾಠೆ ಇದ್ದರು. 
ಉಡುಪಿ

ಸಾಂಕ್ರಾಮಿಕ ರೋಗವಾಗಿ ಕಾಡುತ್ತಿದೆ ಭ್ರಷ್ಟಾಚಾರ

* ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಿಷಾದ

* ಕಾನೂನು ಅರಿವು, ಮಾಹಿತಿ ಹಕ್ಕು ಕಾರ್ಯಾಗಾರ

* ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಯೋಜನೆ

ಉಡುಪಿ: ಭ್ರಷ್ಟಾಚಾರ ಎನ್ನುವುದು ದೇಶಕ್ಕೆ ಅಂಟಿರುವ ದೊಡ್ಡ ಕಾಯಿಲೆ. ಅದು ಸಾಮಾಜಿಕ ಪಿಡುಗಷ್ಟೇ ಅಲ್ಲ, ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ದೇಶದಲ್ಲಿ ಇದೊಂದು ವಿಚಿತ್ರ ವ್ಯವಸ್ಥೆಯಾಗಿದೆ. ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ ಎಂಬ ಅಸಹಾಯಕತನದಿಂದ, ಹೋರಾಟ-ವಿರೋಧ ಮಾಡದ್ದರಿಂದ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಮತದಾರರೂ ಸಹ ಆಮಿಷಕ್ಕೆ ಒಳಗಾಗುತ್ತಿದ್ದಾರೆ ಎಂದು ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಿಷಾದ ವ್ಯಕ್ತಪಡಿಸಿದರು. 
ಉಡುಪಿ ನಗರದ ಎಲ್​ಎಂಎಚ್​ ರಸ್ತೆ ಮಾರ್ಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ'ಯ ವತಿಯಿಂದ ಭಾನುವಾರ (ಮೇ 3) ಆಯೋಜಿಸಿದ್ದ 'ಕಾನೂನು ಅರಿವು ಮತ್ತು ಮಾಹಿತಿ ಹಕ್ಕು ಕಾಯಿದೆಗಳ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡಿದರು.
 ಕಾರ್ಯಾಗಾರ ಉದ್ಘಾಟಿಸಿ ಡಾ. ಪಿ.ವಿ. ಭಂಡಾರಿ ಮಾತನಾಡಿದರು.

ಆಗಿದೆ ಅನೇಕರ ಹತ್ಯೆ

ಆರ್​ಟಿಐ ಕಾಯಿದೆಯ ಬಲವನ್ನು ಸಂಪೂರ್ಣವಾಗಿ ಕುಗ್ಗಿಸಲಾಗಿದೆ. ಆ ಮಟ್ಟದಲ್ಲಿ ಭ್ರಷ್ಟಾಚಾರ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ವಿವಿಧ ಭ್ರಷ್ಟಾಚಾರ ಬಯಲಿಗೆಳೆದ ಅನೇಕರ ಹತ್ಯೆಯನ್ನೂ ಮಾಡಲಾಗಿದೆ. ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲೆಡೆ ಭ್ರಷ್ಟಾಚಾರ ತುಂಬಿಕೊಂಡಿದೆ. ಇದನ್ನು ವಿರೋಧಿಸಿ ಬದಲಾವಣೆ ತರಲು, ರಾಜ್ಯ-ದೇಶದಲ್ಲಿ ಒಳ್ಳೆಯ ಆಡಳಿತ ಜಾರಿಗೆ ಬರಲು ಜನರೇ ಭ್ರಷ್ಟಾಚಾರ ವಿರೋಧಿಸುವಂತಾಗಬೇಕು. ಅದಕ್ಕಾಗಿ ಜಾಗೃತಿ, ಅರಿವು ಕಾರ್ಯಕ್ರಮ ಅತ್ಯಗತ್ಯ ಎಂದರು.

ವಿಶೇಷ ಉಪನ್ಯಾಸ

'ಭ್ರಷ್ಟಾಚಾರ ವಿರೋಧಿ ಹೋರಾಟಗಳ ಸವಾಲು' ವಿಷಯವಾಗಿ ವೇದಿಕೆಯ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಉಪನ್ಯಾಸ ನೀಡಿದರು. 'ಮಾಹಿತಿಯ ಹಕ್ಕು ಕಾಯಿದೆ' ಕುರಿತು ವಿಷಯತಜ್ಞ ಮಂಜುನಾಥ್​ ಹಿರೇಚೌಟಿ ಮತ್ತು 2ನೇ ಭಾಗವಾದ 'ಕಾನೂನು ಅರಿವು" ಕಾರ್ಯಾಗಾರವನ್ನು ಮೈಸೂರು ಜಿಲ್ಲೆಯ ಯುವ ವಕೀಲ ರವಿಕುಮಾರ್​ ಎಂ. ನಡೆಸಿಕೊಟ್ಟರು. 
ವೇದಿಕೆಯ ಅಧ್ಯಕ್ಷ ಮಂಜುನಾಥ್​ ಎಸ್​. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ರಾಜ್ಯ ಕಾರ್ಯದರ್ಶಿ ವಿ.ಆರ್​. ಮರಾಠೆ, ಕೆಆರ್​ಎಸ್​ ಪಕ್ಷದ ರಾಜ್ಯಾಧ್ಯಕ್ಷ ದೀಪಕ್​ ಸಿ.ಎನ್​., ವೇದಿಕೆಯ ಸದಸ್ಯ ಎಲ್​.ಜೀವನ್​ ಉಪಸ್ಥಿತರಿದ್ದರು.
ವೇದಿಕೆಯ ಸದಸ್ಯರು ನಾಡಗೀತೆ ಹಾಡಿದರು. ಕವನಾ ಶೆಟ್ಟಿ ಸ್ವಾಗತಿಸಿದರು. ಉಡುಪಿ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಆರತಿ ಅಶೋಕ್​ ವಂದಿಸಿದರು.