ಉಡುಪಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಎಂ. ಕೊಳ.
* ಉಡುಪಿಯಲ್ಲಿ ಖಾಸಗಿ ಬಸ್ ಡಿಕ್ಕಿ
* ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವು
ಅಪಘಾತದಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ (37) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸಭೆ ಮುಗಿಸಿ, ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದರು. ಅಲ್ಲಿಂದ ಮನೆಗೆ ಹೋಗಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದಿದ್ದು, ಅವರ ಮೈಮೇಲೆ ಹಾಯ್ದುಹೋಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಎಸ್ಐ ಮಹೇಶ್ ಕಾನೂನು ಪ್ರಕ್ರಿಯೆ ನಡೆಸಿದರು. ಘಟನಾ ಸ್ಥಳದಲ್ಲಿದ್ದ ಆಟೋ ಚಾಲಕರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.
ಮೃತರಿಗೆ ಪತಿ, ಬಿಜೆಪಿ ಮುಖಂಡ ಮಂಜುನಾಥ್ ಕೊಳ ಹಾಗೂ ಇಬ್ಬರು ಪುತ್ರರಿದ್ದಾರೆ.