ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಮುಖವಾಣಿ 107ನೇ ವಿಪ್ರವಾಣಿ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕುಂದಾಪುರ: ವಿಪ್ರ ಸಂಘಟನೆಯ ಸಬಲೀಕರಣದ ಉದ್ದೇಶದಿಂದ ಸೌಹಾರ್ದಯುತ ಸಂವಹನಕ್ಕಾಗಿ ವಿಪ್ರವಾಣಿ ಪತ್ರಿಕೆಯನ್ನು ಆರಂಭಿಸಲಾಗಿದೆ. 107ನೇ ಸಂಚಿಕೆ ಬಿಡುಗಡೆಗೊಳ್ಳುತ್ತಿರುವುದು ಬ್ರಾಹ್ಮಣರ ಬಲವರ್ಧನೆಯ ಸಂಕೇತವಾಗಿದೆ. ಡಿ.21ರಂದು ಹಂಗಳೂರು ಶ್ರೀ ವೆಂಕಟಲಕ್ಷ್ಮೀ ಕಲ್ಯಾಣ ಮಂಟಪ ಆವರಣದಲ್ಲಿ ಅಕ್ಷರ ಲಕ್ಷ ಗಾಯತ್ರೀ ಯಾಗ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಸ್.ಕೃಷ್ಣಾನಂದ ಚಾತ್ರ ಹೇಳಿದರು.
ದ್ರಾವಿಡ ಬ್ರಾಹ್ಮಣ ಪರಿಷತ್ ಮಾರಣಕಟ್ಟೆ ವಲಯದ ಆಶ್ರಯದಲ್ಲಿ ನೇರಳಕಟ್ಟೆಯ ಶಂಕರ ಧಾರ್ಮಿಕ ಮಂದಿರದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿಪ್ರವಾಣಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಧಾನ ಸಂಪಾದಕ ಪ್ರೊ.ಶಂಕರ ರಾವ್ ಕಾಳಾವರ ಮಾತನಾಡಿದರು. ಅಕ್ಷರ ಲಕ್ಷ ಗಾಯತ್ರೀ ಯಾಗ, ತ್ರಯಂಬಿಕಾ ಯಾಗ, ಲಲಿತಾ ಸಹಸ್ರನಾಮ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಶಾರ್ಕೆ ಶಂಕರನಾರಾಯಣ ಭಟ್ ಮತ್ತು ಮಂಜುನಾಥ ಅಡಿಗ ಬಿಡುಗಡೆಗೊಳಿಸಿದರು.
ಯುವ ವಿಪ್ರ ವೇದಿಕೆ ಅಧ್ಯಕ್ಷ ಕೇಶವ ಅಡಿಗ ಯಾಗದ ಬಗ್ಗೆ ಮಾಹಿತಿ ನೀಡಿದರು. ವಿಪ್ರವಾಣಿ ಸಂಚಿಕೆ ಪ್ರಾಯೋಜಕ ಮಹಾಬಲ ಬಾಯರಿ ಮತ್ತು ಕಲಾವತಿ ದಂಪತಿ, ಮಾರಣಕಟ್ಟೆ ವಲಯಾಧ್ಯಕ್ಷ ಡಾ.ರಾಜೇಶ್ ಬಾಯರಿ, ಡಾ.ಅನುಲೇಖಾ ಬಾಯರಿ, ಪರಿಷತ್ ಗೌರವಾಧ್ಯಕ್ಷ ಶುಭಚಂದ್ರ ಹತ್ವಾರ್, ಖಜಾಂಚಿ ಶ್ರೀಕಾಂತ ಕನ್ನಂತ, ಮಹಿಳಾ ವೇದಿಕೆ ಅಧ್ಯಕ್ಷೆ ಭಾರ್ಗವಿ ಭಟ್, ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಗೌರಿ ಅಡಿಗ, ಜಿಲ್ಲಾ ಸಂಘದ ಗಣೇಶ್ ರಾವ್ ಉಪಸ್ಥಿತರಿದ್ದರು. ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.