ಅಳಿವಿನಂಚಿನಲ್ಲಿರುವ ಗಂಗೊಳ್ಳಿಯ ಮಡಿವಾಳ ಕೆರೆ. 
ಉಡುಪಿ

ಗಂಗೊಳ್ಳಿಯಲ್ಲಿ ಕೆರೆ ಅತಿಕ್ರಮಣ

ರಾಘವೇಂದ್ರ ಪೈ ಗಂಗೊಳ್ಳಿ
ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕೆರೆ ಅತಿಕ್ರಮಣ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಅಸವಾಧಾನಕ್ಕೆ ಕಾರಣವಾಗಿದೆ.
ರಾಜ್ಯದ ಹಲವೆಡೆ ಕೆರೆಗಳನ್ನು ಅತಿಕ್ರಮಿಸಿಕೊಂಡು ರಸ್ತೆ, ಮನೆ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಿದೆ. ಆದರೆ ಗಂಗೊಳ್ಳಿಯಲ್ಲಿ ವಾತ್ರ ಇಂತಹ ಯಾವುದೇ ಗಂಭೀರ ಕ್ರಮಗಳು ನಡೆಯದಿರುವುದು ಅತಿಕ್ರಮಣದಾರರಿಗೆ ವರದಾನವಾಗಿ ಪರಿಣಮಿಸಿದೆ.
ಸರ್ಕಾರಿ ದಾಖಲೆಗಳ ಪ್ರಕಾರ ಗಂಗೊಳ್ಳಿಯಲ್ಲಿ 15ಕ್ಕೂ ಅಧಿಕ ಸಣ್ಣ ಕೆರೆಗಳಿದ್ದು, 5 ಕೆರೆಗಳು ಅತಿ ದೊಡ್ಡ ಕೆರೆಗಳಾಗಿವೆ. ಕೃಷಿ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದ್ದ ಸಣ್ಣ ಕೆರೆಗಳು ಇದೀಗ ಕೃಷಿ ಚಟುವಟಿಕೆ ಇಲ್ಲದಿರುವುದರಿಂದ ಮುಚ್ಚಿ ಹೋಗಿವೆ. ಮಡಿವಾಳ ಕೆರೆ ಹಾಗೂ ಚಿಟ್ಟಿ ಕೆರೆ ಹೆಸರಿಗೆ ವಾತ್ರ ಇದ್ದು, ಹಂತ ಹಂತವಾಗಿ ಅತಿಕ್ರಮಣಗೊಳ್ಳುತ್ತಿದೆ.
ಸರ್ಕಾರ ಹಾಗೂ ಕಂದಾಯ ಇಲಾಖೆ ನಿರ್ಲಕ್ಷೃದಿಂದ ಗಂಗೊಳ್ಳಿ ಗ್ರಾಮದಲ್ಲಿ ಬಹುತೇಕ ಕೆರೆಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಇಂತಹ ಕೆರೆಗಳ ಸಂರಕ್ಷಣೆಗೆ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಮೌನ

ಗಂಗೊಳ್ಳಿಯಲ್ಲಿ ಅಳಿದುಳಿದ ಕೆರೆಗಳು ಕಣ್ಣೆದುರೇ ಅತಿಕ್ರಮಣಗೊಳ್ಳುತ್ತಿದ್ದರೂ ತಾಲೂಕು, ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಕೆರೆಗಳ ಜಾಗದ ಸರ್ವೇ ಕೂಡ ಈವರೆಗೆ ನಡೆದಿಲ್ಲ. ಗ್ರಾಮಸಭೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಇಲಾಖೆ ಅಧಿಕಾರಿಗಳ ಈ ನಡೆ ಅನುಮಾನ ಮೂಡಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೆರೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಕೆರೆ ಸಂರಕ್ಷಣೆ ಬಗ್ಗೆ ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಗಂಗೊಳ್ಳಿಯಲ್ಲಿ ದಿನದಿಂದ ದಿನಕ್ಕೆ ಕೆರೆಗಳ ಒತ್ತುವರಿ ಹೆಚ್ಚಾಗುತ್ತಿದೆ. ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ರಾಮಸಭೆಯ ನಿರ್ಣಯಕ್ಕೂ ಬೆಲೆ ನೀಡುತ್ತಿಲ್ಲ.

— ನರಸಿಂಹ, ಗ್ರಾಮಸ್ಥ

ಕೆರೆ ಅತಿಕ್ರಮಣ, ಕೆರೆ ಮುಚ್ಚುವಂತಹ ಪ್ರಕರಣಗಳು ನಡೆದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ವಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೆರೆ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದ್ದು, ಕೆರೆ ಅತಿಕ್ರಮಣ ನಡೆದಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

— ರವಿ, ಗಂಗೊಳ್ಳಿ ಪಿಡಿಒ