ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ. 
ಉಡುಪಿ

ಉಡುಪಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್​ಗೆ ಬೀಗ!!

* ಬಡ ರೋಗಿಗಳು, ಸಂಬಂಧಿಗಳ ಪರದಾಟ

* ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಆಗ್ರಹ

ಉಡುಪಿ: ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ರಾಜ್ಯದ ಗಮನ ಸೆಳೆಯುತ್ತದೆ. ಆದರೆ, ಅಜ್ಜರಕಾಡುನಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಭವಿಸಿರುವ ವಿವಿಧ ಸಮಸ್ಯೆಗಳಿಂದ ಬಡರೋಗಿಗಳು, ಸಂಬಂಧಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ಜಿಲ್ಲಾಸ್ಪತ್ರೆಯ ವಠಾರದಲ್ಲಿದ್ದ ಕ್ಯಾಂಟೀನ್​ ಒಂದು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದು, ಜತೆಯಲ್ಲಿರುವ ರೋಗಿಗಳ ಸಂಬಂಧಿಗಳಿಗೆ ಸೂಕ್ತ ಆಹಾರ ಲಭಿಸುತ್ತಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಆಹಾರ ವ್ಯವಸ್ಥೆ ಇದ್ದರೂ ಸಂಬಂಧಿಗಳು ದೂರದ ಹೋಟೆಲ್​ಗಳಿಗೆ ತೆರಳಿ ಆಹಾರ ಸೇವಿಸುವಂತಾಗಿದೆ.
ಜಿಲ್ಲಾಸ್ಪತ್ರೆಯ ಹೊರಾಂಗಣದಲ್ಲಿರುವ ಕ್ಯಾಂಟೀನ್​ ಬಂದ್​ ಆಗಿರುವುದು.
ಅಗತ್ಯ ಔಷಧಗಳ ಅಲಭ್ಯತೆ
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಅಗತ್ಯವಿರುವ ಎಲ್ಲ ಔಷಧ, ಚುಚ್ಚುಮದ್ದು ಲಭ್ಯವಾಗುತ್ತಿಲ್ಲ. ವೈದ್ಯರು ತಪಾಸಣೆ ನಡೆಸಿದ ಬಳಿಕ ಚೀಟಿಯಲ್ಲಿ ಬರೆದುಕೊಡುವ ಕೆಲವು ಮಾತ್ರೆಗಳು ದುಬಾರಿಯಾಗಿದ್ದು, ಅವರು ಆಸ್ಪತ್ರೆಯಲ್ಲಿರುವ ಔಷಧಾಲಯದಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚು ಹಣ ತೆತ್ತು ಖಾಸಗಿ ಔಷಧದ ಅಂಗಡಿಗಳಲ್ಲಿ ಬಡರೋಗಿಗಳು ಖರೀದಿಸಬೇಕಿದೆ. ರೋಗಿಗಳಿಗೆ ವೈದ್ಯರು ಬರೆದುಕೊಡುವ ಪ್ರತಿಯೊಂದು ಔಷಧವೂ ಜಿಲ್ಲಾಸ್ಪತ್ರೆಯಲ್ಲಿಯೇ ಲಭಿಸುವಂತೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಬೇಕು ಎಂದು ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಲಿಫ್ಟ್ ಬಂದ್​ ಆಗಿರುವುದು.
ಕೆಟ್ಟುಹೋದ ಲಿಫ್ಟ್
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯೂ ಸಹ ಅವ್ಯವಸ್ಥೆಯ ಆಗರವಾಗಿದೆ. ಬಹುಮಹಡಿಗಳ ಆಸ್ಪತ್ರೆ ಇದಾಗಿದ್ದು, ಸಾರ್ವಜನಿಕರ ಬಳಕೆಯ ಲಿಫ್ಟ್ ಯಂತ್ರ ಕೆಟ್ಟು ಹಲವು ದಿನ ಕಳೆದಿದೆ. ಮೆಟ್ಟಿಲು ಹತ್ತಿ ಮಹಡಿ ಎರಬೇಕಾಗಿದ್ದು, ರೋಗಿಗಳಿಗೆ ತೊಂದರೆ ಆಗುತ್ತಿದೆ. ವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ತೀವ್ರ ತೊಂದರೆಯಾಗುತ್ತಿದೆ. 

ಜನರ ಪರದಾಟ

ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಪೌಷ್ಟಿಕ ಪಾನೀಯ, ಸೋಪು, ಎಣ್ಣೆ, ಹಲ್ಲುಜ್ಜುವ ಪೇಸ್ಟ್​, ಇನ್ನಿತರ ವಸ್ತುಗಳು ರೋಗಿಗಳಿಗೆ ಅಗತ್ಯತೆ ಇರುತ್ತದೆ. ಅಲ್ಲದೆ, ಶವ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಇಡುವ ವಾರೀಸುದಾರರು ಇರುವ ಮತ್ತು ಇಲ್ಲದ ಶವಗಳಿಗೆ ಪ್ಲಾಸ್ಟಿಕ್​ ಹೊದಿಕೆ, ದೇಹದ ಭಾಗಗಳನ್ನು ಸಂಗ್ರಹಿಸಿಡುವ ಪ್ಲಾಸ್ಟಿಕ್​ ಡಬ್ಬ, ಸುಗಂಧ ದ್ರವ್ಯ ಇನ್ನಿತರ ಪರಿಕರಗಳು ತೀವ್ರ ಅಗತ್ಯತೆ ಇರುತ್ತದೆ. ಆದರೆ, ಅವು ಅಲ್ಲಿ ಲಭಿಸದ್ದರಿಂದ ಖರೀದಿಗೆ ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ.

ನಿರ್ಗತಿಕ ರೋಗಿಗಳಿಗೆ ಹೊಣೆ ಯಾರು?

ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಂಭೀರ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಇರುವ ಅಪರಿಚಿತ ರೋಗಿಗಳನ್ನು ಉಡುಪಿಯಲ್ಲಿರುವ ಸಮಾಜಸೇವಕರು, 112 ಪೊಲೀಸ್​ ತುರ್ತು ಸಹಾಯವಾಣಿ, 108 ಆಂಬುಲೆನ್ಸ್​ ವಾಹನಗಳಿಂದ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸುತ್ತಾರೆ. ದಿಕ್ಕಿಲ್ಲದ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖವಾದರೂ ಆಸ್ಪತ್ರೆಯಲ್ಲಿಯೇ ಇರಬೇಕಾದ ಪ್ರಸಂಗ ಹೆಚ್ಚುತ್ತಿದೆ. ಅಂತಹ ನಿರ್ಗತಿಕರನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಗತಿಕರ ಪುನರ್ವಸತಿ ಕೇಂದ್ರಗಳಲ್ಲಿ ದಾಖಲುಪಡಿಸುವ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ  ಸಹಸಂಚಾಲಕ ತಾರಾನಾಥ್​ ಮೇಸ್ತ ಶಿರೂರು.
"

ಉಡುಪಿಯಲ್ಲಿ ನೂತನ ಜಿಲ್ಲಾಸ್ಪತ್ರೆಯ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಿರುವ ಜಿಲ್ಲಾಸ್ಪತ್ರೆಯಲ್ಲೂ ಸೂಕ್ತ ವ್ಯವಸ್ಥೆ ಇಲ್ಲ. ಆಸ್ಪತ್ರೆಯ ವಠಾರದಲ್ಲಿಯೇ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಬೇಕಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಇಲ್ಲಿನ ಸಮಸ್ಯೆ ನಿವಾರಿಸಲು ಮುಂದಾಗಬೇಕು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಉಡುಪಿಗೆ ಬರುತ್ತಾರೆಂಬ ಮಾಹಿತಿ ಅವರು ಜಿಲ್ಲಾಸ್ಪತ್ರೆಗೆ ಬಂದು ಇಲ್ಲಿನ ಸಮಸ್ಯೆ ಪರಿಶೀಲಿಸಬೇಕೆಂದು ಒತ್ತಾಯಿಸುತ್ತೇನೆ.

— ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ.

"

ಈಹಿಂದೆ ಉಪಲೋಕಾಯುಕ್ತರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಹೊರಾಂಗಣದಲ್ಲಿದ್ದ ಕ್ಯಾಂಟೀನ್​ಗೂ ಸಹ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ಗುಣಮಟ್ಟದ ಆಹಾರ ಇಲ್ಲದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಆಹಾರ ಅಧಿಕಾರಿಗಳು ಪರಿಶೀಲಿಸಿ ತಾತ್ಕಾಲಿಕವಾಗಿ ಕ್ಯಾಂಟೀನ್​ ಮುಚ್ಚಿಸಿದ್ದರು. ಮತ್ತೆ ಕ್ಯಾಂಟೀನ್​ ಆರಂಭಗೊಳ್ಳಲಿದೆ. ಸರ್ಕಾರದಿಂದ ಪೂರೈಕೆಯಾಗುವ ಉಚಿತ ಔಷಧವನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಆಯುಷ್​ಮಾನ್​ ಭಾರತ ಆರೋಗ್ಯ ಕರ್ನಾಟಕದಲ್ಲಿ ಲಭ್ಯವಿರುದ ಅನುದಾನದಲ್ಲಿ ವಿವಿಧ ಔಷಧ ಖರೀದಿಸಿ ರೋಗಿಗಳಿಗೆ ನೀಡಲಾಗುತ್ತಿದೆ.

— ಡಾ. ಎಚ್​. ಅಶೋಕ್​. ಜಿಲ್ಲಾ ಸರ್ಜನ್​.