ಉಡುಪಿ: ಕರ್ನಾಟಕದ ನೂರಾರು ಪ್ರದೇಶಗಳಲ್ಲಿ ಪ್ರಾಚಿನ ನಿವೇಶನಗಳ ಉತ್ಖನನ ಮಾಡಲಾಗಿದ್ದು, ಅದರಲ್ಲಿ ಶೇ.99ರಷ್ಟು ಉತ್ತರ ಕರ್ನಾಟಕದಲ್ಲಿಯೇ ಆಗಿದೆ. ದಕ್ಷಿಣ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಪ್ರಾಗೈತಿಹಾಸಿಕ ತಾಣಗಳಿದ್ದರೂ ಉತ್ಖನನ ಮಾಡಿರುವುದು ಬಲು ಕಡಿಮೆ. ಇದಕ್ಕೆ ಶಾಸ್ತ್ರೀಯ ಹಾಗೂ ಶಿಸ್ತುಬದ್ಧ ಉತ್ಖನನ ತಜ್ಞರ ಕೊರತೆ ಕಾರಣವಾಗಿದೆ ಎಂದು ಹಿರಿಯ ಸಂಶೋಧಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜ್ನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಸಹಯೋಗದಲ್ಲಿ ಶನಿವಾರ (ನ.28) ಆಯೋಜಿಸಿದ್ದ ಟಿ.ವಿಮಲಾ ವಿ. ಪೈ ಪ್ರಾಯೋಜಿತ ಒಂದು ಲಕ್ಷ ರೂ. ನಗದು ಸಹಿತ 2025ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಪ್ರಶಸ್ತಿ ಪ್ರದಾನ
ಹಿರಿಯ ಪುರಾತತ್ತ್ವ ಹಾಗೂ ಶಾಸನ ತಜ್ಞ ಮೈಸೂರಿನ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರಿಗೆ 'ರಾಷ್ಟ್ರಕವಿ ಗೋವಿಂದ ಪೈ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಕರೆದೊಯ್ಯಬೇಕು. ಅದರಿಂದ ವಿವಿಧ ಬಗೆಯ ಹಾಗೂ ರೋಮಾಂಚನಕಾರಿ ಜ್ಞಾನ ಪಡೆಯಲು ಸಾಧ್ಯ. ತಲಕಾಡಿನಲ್ಲಿ ಗಾಳಿಯಲ್ಲಿ ಬರುವ ಮರಳು ತಡೆಯಲು ಗೋಡೆ ಕಟ್ಟಿರುವುದು ಸಂಶೋಧನೆಯಿಂದ ತಿಳಿದುಬಂತು ಎಂದರು.
ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಸಂಶೋಧನನಾ ಪ್ರಾಧ್ಯಾಪಕ ಡಾ.ಡೆನಿಸ್ ಫರ್ನಾಂಡೀಸ್ ಎಂ.ಗೋವಿಂದ ಪೈಗಳ ಐತಿಹಾಸಿಕ ಬರಹಗಳಲ್ಲಿ ಪ್ರಾದೇಶಿಕ ಹಿರಿಮೆ ಹಾಗೂ ರಾಷ್ಟ್ರೀಯವಾದಿ ಚಿಂತನೆ ವಿಷಯವಾಗಿ ಉಪನ್ಯಾಸ ನೀಡಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಷನ್ನ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ ಅಧ್ಯಕ್ಷತೆ ವಹಿಸಿದ್ದರು.
ಆದಿತಿ ಹಾಗೂ ರಶ್ಮಿಕಾ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಆರ್ಸಿ ಸಹ ಸಂಶೋಧಕ ಡಾ. ಅರುಣಕುಮಾರ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿದರು.
ಧಾರವಾಡದ ಅಣ್ಣಿಗೇರಿಯಲ್ಲಿ 2011ರಲ್ಲಿ ಮಾನವ ತಲೆಬುರುಡೆ, ಮೂಳೆಗಳು ಸಿಕ್ಕಾಗ ಹತ್ಯಾಕಾಂಡ, ಯುದ್ಧ, ನರಬಲಿಯ ಊಹಾಪೋಹ ಕೇಳಿಬಂದಿತ್ತು. ಆದರೆ, ಡಾ. ಎಂ.ಎಸ್. ಕೃಷ್ಣಮೂರ್ತಿ ಅವರು ಉತ್ಖನನದ ಮೂಲಕ ಅಲ್ಲಿ ಬರಗಾಲ ಬಂದು ಸತ್ತವರ ಸಾಮೂಹಿಕ ಸಮಾಧಿ ಅದು ಎಂಬ ಸತ್ಯವನ್ನು ಮುಂದಿಟ್ಟಿದ್ದರು. ಉತ್ಖನನ ಕಾರ್ಯದಿಂದ ಇತಿಹಾಸ ಇನ್ನಷ್ಟು ಹೊಳಪು ಕಾಣಲು ಸಾಧ್ಯ.ಡಾ. ಪುಂಡಿಕಾಯಿ ಗಣಪಯ್ಯ ಭಟ್. ಹಿರಿಯ ಸಂಶೋಧಕ.