ಆಹಾರ ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್.
* ಆಹಾರ ಸಚಿವ ರಿಜ್ವಾನ್ ಅರ್ಷದ್ ಸೂಚನೆ
* ಸೆ.30ರ ವರೆಗೆ ಗ್ರಾಹಕರಿಗೆ ಕಾಲಾವಕಾಶ
* ಇಂದಿರಾ ಕಿಟ್ ಯೋಜನೆ ಶೀಘ್ರ ಜಾರಿಗೆ
ಉಡುಪಿ: ರಾಜ್ಯದಲ್ಲಿರುವ ಬಿಪಿಲ್ ಹಾಗೂ ಎಪಿಎಲ್ ಪಡಿತರ ಕಾರ್ಡ್ ಹೊಂದಿರುವ ಎಲ್ಲರೂ ಸಹ ಕೆವೈಸಿ ಮಾಡಿಸಬೇಕು. ಐದು ವರ್ಷದ ಹಿಂದೆ ಕೆವೈಸಿ ಮಾಡಿರುವ ಸುಮಾರು 2.59 ಕೋಟಿ ಪಡಿತರ ಚೀಟಿಗಳಿದ್ದು, ಸೆ. 30ರೊಳಗೆ ಕೆವೈಸಿ ಮಾಡಲು ಗಡುವು ನೀಡಲಾಗಿದೆ. ಉಳಿದವರೂ ಸಹ ಕಡ್ಡಾಯವಾಗಿ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ (ಆ.15) ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಆಹಾರ ಭದ್ರತಾ ಯೋಜನೆ
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 4.01 ಕೋಟಿ ಜನರಿಗೆ ಮಾತ್ರ ಪಡಿತರ ಅನುಮತಿ ನೀಡಿದೆ. ಹೀಗಾಗಿ ಬಾಕಿ ಉಳಿದ ಸುಮಾರು 50 ಲಕ್ಷ ಜನರನ್ನು ಪಡಿತರ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ 4.50 ಕೋಟಿ ಜನರು ಮಾನದಂಡದಂತೆ ಆಹಾರ ಭದ್ರತೆ ಹೊಂದಲು ಅರ್ಹರಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕಿಟ್ ಯೋಜನೆ ಜಾರಿಗೆ ತಯಾರಿ ನಡೆದಿದೆ ಎಂದರು.
4 ಲಕ್ಷ ಪಡಿತರ ರದ್ದು
ಕೇಂದ್ರ ಸರ್ಕಾರ 7.59 ಲಕ್ಷ ಪಡಿತರ ಚೀಟಿಗಳ ರದ್ದತಿಗೆ ಸೂಚಿಸಿದ್ದು, 4 ಲಕ್ಷ ಪಡಿತರ ರದ್ದು ಮಾಡಲಾಗಿದೆ. ಉಳಿದ 3.59 ಲಕ್ಷ ಪಡಿತರ ಚೀಟಿಗಳ ರದ್ದು ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಅವುಗಳ ಕುರಿತು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಟನೆಗಳಿಗಿಲ್ಲ ಚಟುವಟಿಕೆಗೆ ಅನುಮತಿ
ಸಚಿವ ಜಮೀರ್ ಅಹ್ಮದ್ ವಿರುದ್ಧ ಟೀಕಿಸಲು ಬಿಜೆಪಿಗೆ ಯಾವುದೇ ಹಕ್ಕಿಲ್ಲ. ನಾಗ್ಪುರದಲ್ಲಿರುವ ಸಂಘದ ಕಚೇರಿಯಲ್ಲಿ ಮೊದಲು ಧ್ವಜಾರೋಹಣ ಮಾಡಿ. ಕಾಂಗ್ರೆಸ್ನಲ್ಲಿ ಇಂದಿಗೂ ಸಹ ಸ್ವಾತಂತ್ರ್ಯಹೋರಾಟದ ರಕ್ತ ಹರಿಯುತ್ತಿದೆ. ಈ ಕುರಿತಾಗಿ ಬಿಜೆಪಿಯವರ ಪಾಠ ನಮಗೆ ಬೇಡ. ಆರ್ಎಸ್ಎಸ್ ಸಹಿತ ನೋಂದಣಿಯಾಗದ ಯಾವುದೇ ಸಂಘ-ಸಂಸ್ಥೆಗಳು/ಎನ್ಜಿಒಗಳು ಸಾರ್ವಜನಿಕ ಪಾರ್ಕ್, ಶಾಲಾ-ಕಾಲೇಜು ಮೈದಾನದಲ್ಲಿ ಅನಧಿಕೃತವಾಗಿ ಚಟುವಟಿಕೆ ಮಾಡುವಂತಿಲ್ಲ ಎಂದು ಸರ್ಕಾರವೇ ತಿಳಿಸಿದೆ ಎಂದು ಸಚಿವ ರಿಜ್ವಾನ್ ಸಮರ್ಥಿಸಿದರು.
ಉಡುಪಿ ಸಾಮಾನ್ಯ ಜಿಲ್ಲೆ ಅಲ್ಲ ಎನ್ನುವುದು ನನಗೆ ಅರಿವಿದೆ. ಪ್ರತಿವರ್ಷ ಇಲ್ಲಿನ ಶೈಕ್ಷಣಿಕ ಸಾಧನೆಯೇ ಈ ಜಿಲ್ಲೆಯ ಸಾಮರ್ಥ್ಯ ಅರ್ಥವಾಗುತ್ತದೆ. ಇಂತಹ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಸೇವೆ ಮಾಡಲು ಅವಕಾಶ ಲಭಿಸಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ.
— ರಿಜ್ವಾನ್ ಅರ್ಷದ್. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ.