ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಇನ್ನಿತರ ಶೈಕ್ಷಣಿಕ ವಿಚಾಗಳ ಕುರಿತ ಸಭೆ ಕುಂದಾಪುರದಲ್ಲಿ ನಡೆಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಶೋಭಾ ಶೆಟ್ಟಿ, ಉಮಾ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು 15 ದಿನಗಳಷ್ಟೇ ಬಾಕಿಯಿದೆ. ಈಗಾಗಲೇ ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ. ಮುಂಬರುವ ಪರೀಕ್ಷೆಯಲ್ಲಿ ಕುಂದಾಪುರ ಕ್ಷೇತ್ರದ ಎಲ್ಲ ಮಕ್ಕಳು ಉತ್ತೀರ್ಣರಾಗುವಂತೆ ಅಧಿಕಾರಿಗಳು, ಶಾಲಾ ಶಿಕ್ಷಕರು, ಪಾಲಕರು ಪ್ರಯತ್ನಿಸಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಇನ್ನಿತರ ಶೈಕ್ಷಣಿಕ ವಿಚಾರಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣವಿದ್ದು, ಕರಾವಳಿಯ ಬಹುತೇಕ ಕಡೆ ಖಾಸಗಿ ಬಸ್ ಮಾತ್ರ ಇದೆ. ಮಕ್ಕಳಿಗೆ ಅನುಕೂಲವಾಗುವಂತೆ ಖಾಸಗಿ ಬಸ್‌ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ಎಂದು ಶಾಸಕರಿಗೆ ಮುಖ್ಯಶಿಕ್ಷಕರೊಬ್ಬರು ಮನವಿ ಮಾಡಿದರು.
ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಕಿರಣ್ ಹೆಗ್ಡೆ, ಜಯಶೀಲ್, ಚಂದ್ರಶೇಖರ್ ಶೆಟ್ಟಿ, ಉದಯ ಗಾಂವ್ಕರ್ ಮತ್ತಿತರರು ಮಾತನಾಡಿದರು.
ಗುಣಮಟ್ಟದ ಆಹಾರ ಸಾಮಗ್ರಿ ಪೂರೈಸಿ
ಶಾಲೆಗಳಿಗೆ ಕೆಲ ತಿಂಗಳಿಂದ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ ಎಂಬ ಮಾಹಿತಿಯಿದೆ. ಅದರಲ್ಲೂ ಬೇಳೆ ತೀರಾ ಕಳಪೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಒಬ್ಬ ಶಿಕ್ಷಕರೂ ನನ್ನ ಗಮನಕ್ಕೆ ತಂದಿಲ್ಲ. ಯಾಕೆ ಹೀಗೆ ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತೀರಿ? ಪೂರೈಕೆ ಮಾಡುವವರು ಗುಣಮಟ್ಟಕ್ಕೆ ಆದ್ಯತೆ ಕೊಡಿ. ಇದು ಮಕ್ಕಳು ತಿನ್ನುವ ಆಹಾರ ಎನ್ನುವುದು ನೆನಪಿರಲಿ. 3 ತಿಂಗಳ ಬದಲು ತಿಂಗಳಿಗೊಮ್ಮೆ ಆಹಾರ ಸಾಮಗ್ರಿ ಪೂರೈಕೆ ಮಾಡಲು ಪ್ರಯತ್ನಿಸಿ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚಿಸಿದರು.