ಉಡುಪಿ ಜಿಲ್ಲಾ ರೆಡ್​ ಕ್ರಾಸ್​ಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್​ ರಶ್ಮಿ ಎಸ್​.ಆರ್​ 
ಉಡುಪಿ

ಉಡುಪಿ ಜಿಲ್ಲಾ ರೆಡ್​ ಕ್ರಾಸ್​ಗೆ ಆಡಳಿತಾಧಿಕಾರಿ ನೇಮಕ

* ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

* ಕುಂದಾಪುರ ಏಸಿ ರಶ್ಮಿ ಎಸ್​.ಆರ್​. ನೇಮಕ

ಉಡುಪಿ: ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯ ಅಧ್ಯಕ್ಷರ ಶಾಸನಬದ್ಧ ಅಧಿಕಾರಾವಧಿ ಮುಗಿದಿದ್ದು, ವಾರ್ಷಿಕ ಮಹಾಸಭೆ (ಎಜಿಎಂ)ಯ ಚುನಾವಣೆ ನಡೆದು ಹೊಸ ಅಧ್ಯಕ್ಷರ ನೇಮಕ ಆಗುವವರೆಗೆ ಜಿಲ್ಲಾ ರೆಡ್​ ಕ್ರಾಸ್​ಗೆ ಆಡಳಿತಾಧಿಕಾರಿ ನೇಮಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶಿಸಿದ್ದಾರೆ.
ಸಂಸ್ಥೆಯ ಕಾರ್ಯ ಚಟುವಟಿಕೆ ಸುಗಮವಾಗಿ ನಡೆಯಬೇಕಿದ್ದರಿಂದ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್​ ರಶ್ಮಿ ಎಸ್​.ಆರ್​. ಅವರನ್ನು ನೇಮಕಗೊಳಿಸಿ ಆ.18ರಂದು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ರೆಡ್​ಕ್ರಾಸ್​ನ ಪ್ರಸ್ತುತ ಅಧ್ಯಕ್ಷರು 2019 ಅ.5ರಿಂದ ಕಾರ್ಯನಿರ್ವಹಿಸುತ್ತಿದ್ದು, 2020ರ ನ.11ರಂದು ನಡೆದ ಸಭೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಇನ್ನೋರ್ವ ಸದಸ್ಯರು ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಪ್ರಸ್ತುತ ಅಧ್ಯಕ್ಷರು ಹೈಕೋರ್ಟ್​ಗೆ ರಿಟ್​ ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ಮತ್ತೆ ಅಧ್ಯಕ್ಷರಾಗಿ ನಿಯೋಜಿತರಾಗಿದ್ದರು. ಅವರ ಅಧಿಕಾರಾವಧಿ 2022ರ ಅ.5ರಂದು ಮುಗಿದಿರುತ್ತದೆ. 

ನಡೆಯದ ವಾರ್ಷಿಕ ಮಹಾಸಭೆ

ಕಳೆದ ಮೇ 13ರಂದು ಸಂಸ್ಥೆಯ ಎಜಿಎಂ ನಡೆಸಲು ದಿನಾಂಕ ನಿಗದಿಪಡಿಸಿ ಎಲ್ಲ ಸದಸ್ಯರಿಗೆ ಪೋಸ್ಟ್​ ಮೂಲಕ ನೋಟಿಸ್ ರವಾನಿಸಲಾಗಿತ್ತು. ಆದರೆ, ನಾಲ್ವರು ಸದಸ್ಯರಿಗೆ ನೋಟಿಸ್​ ತಲುಪಿರಲಿಲ್ಲ. ಅವರು ಕಚೇರಿಗೆ ದೂರು ಸಲ್ಲಿಸಿದ್ದರಿಂದ ವಾರ್ಷಿಕ ಮಹಾಸಭೆ ನಡೆದಿರಲಿಲ್ಲ. ಬಹಳ ವರ್ಷದಿಂದ ಒಬ್ಬರೇ ಅಧ್ಯಕ್ಷರಾಗಿ ಮುಂದುವರಿದಿದ್ದರಿಂದ ಇನ್ನಿತರ ಸದಸ್ಯರ ಅಸಮಾಧಾನ ಹಾಗೂ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು. ಹೀಗಾಗಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆಡಳಿತಾಧಿಕಾರಿ ನೇಮಿಸಿ ಆದೇಶಿಸಿದ್ದಾರೆ.

ವರದಿ ಪ್ರಕಟಿಸದಂತೆ ಮನವಿ

ಭಾರತೀಯ ರೆಡ್​ ಕ್ರಾಸ್​ನ ರಾಜ್ಯಾಧ್ಯಕ್ಷರೂ ಆಗಿರುವ ಉಡುಪಿ ಜಿಲ್ಲಾಧ್ಯಕ್ಷ ಬಸ್ರೂರು ರಾಜೀವ್​ ಶೆಟ್ಟಿ, ರಾಜ್ಯ ಶಾಖೆಯ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಪದಚ್ಯುತಗೊಳಿಸಲಾಗಿದೆ ಎಂಬ ಪರಿಶೀಲಿಸದ ವರದಿಯನ್ನು ಪ್ರಕಟಿಸಬಾರದೆಂದು ವಿವಿಧ ಮಾಧ್ಯಮಗಳ ಇ-ಮೇಲ್​ಗೆ ಆ.31ರಂದು ಮಧ್ಯಾಹ್ನ 3:51ಕ್ಕೆ ಸಂದೇಶ ರವಾನಿಸಿದ್ದಾರೆ.
ಕೆಲವು ಹಿತಾಸಕ್ತ ವ್ಯಕ್ತಿಗಳು ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಪತ್ರಿಕೆಗೆ ನೀಡಲು ಪ್ರಯತ್ನಿಸಬಹುದು. ಸಕ್ಷಮ ಪ್ರಾಧಿಕಾರದ ಅಧಿಕೃತ ನಿರ್ಣಯ ಅಥವಾ ದಾಖಲೆ ದೃಢೀಕರಿಸದ ಯಾವುದೇ ಮಾಹಿತಿ ಪ್ರಕಟಿಸಬಾರದು. ಅದರಿಂದ ನನ್ನ ಗೌರವಕ್ಕೆ ಹಾನಿಯಾಗುವುದಲ್ಲದೆ, ಸದಸ್ಯರು ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸಬಹುದು. ನನ್ನ ವಿವರಣೆ ಹಾಗೂ ದಾಖಲೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಂದೇಶದಲ್ಲಿ ಮನವಿ ಮಾಡಿದ್ದಾರೆ.