ಕುಂಪಲ ಮತ್ತು ಕೋಟೆಪುರದಲ್ಲಿ ಇಕ್ಕಟ್ಟಿನಿಂದ ಕೂಡಿದ ರಸ್ತೆ. 
ಉಡುಪಿ

ಕುಂಪಲ, ಕೋಟೆಪುರ ರಸ್ತೆ ‘ಇಕ್ಕಟ್ಟು’

ಅನ್ಸಾರ್ ಇನೋಳಿ ಉಳ್ಳಾಲ
ಉಳ್ಳಾಲ ತಾಲೂಕಿನ ಹಲವೆಡೆ ಮುಖ್ಯ ರಸ್ತೆಗಳು ಅಗಲೀಕರಣಗೊಂಡು ಸುಸಜ್ಜಿತಗೊಂಡಿವೆ. ಅನೇಕ ಕಡೆಗಳಲ್ಲಿ ಹೊಸ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿವೆ. ಆದರೆ, ತಾಲೂಕಿನ ಜನನಿಬಿಡ ಮತ್ತು ವಾಹನ ದಟ್ಟಣೆಯ ಪ್ರಮುಖ ಪ್ರದೇಶಗಳಾದ ಕುಂಪಲ ಮತ್ತು ಕೋಟೆಪುರದಲ್ಲಿ ಇಂದಿಗೂ ಇಕ್ಕಟ್ಟಿನ ರಸ್ತೆಗಳು ಸವಾಲಾಗಿ ಉಳಿದಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗುತ್ತಿಲ್ಲ.

ದ್ವಿಚಕ್ರ ವಾಹನಕ್ಕೂ ಕಷ್ಟದ ಹಾದಿ

ತೊಕ್ಕೊಟ್ಟು-ತಲಪಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಬೈಪಾಸ್ ಮೂಲಕ ಕುಂಪಲ ಸಂಪರ್ಕ ರಸ್ತೆಯಿದ್ದು, ರಾಜ್ಯ ಹೆದ್ದಾರಿ ಕುತ್ತಾರಿನಿಂದ ಯೆನೆಪೋಯ ಆಸ್ಪತ್ರೆ ಮಾರ್ಗವಾಗಿ ಬಗಂಬಿಲ ಮೂಲಕವೂ ಕುಂಪಲ ತಲುಪಬಹುದು. ರಾ.ಹೆ. ಬೈಪಾಸ್‌ನಿಂದ ಯೆನೆಪೋಯ ಆಸ್ಪತ್ರೆವರೆಗೆ ಸುಮಾರು 3.5 ಕಿ.ಮೀ. ಅಂತರವಿದ್ದು, ಇದು ಜಿಪಂ ರಸ್ತೆಯಾಗಿದೆ. ಪ್ರಸ್ತುತ ಈ ಭಾಗವು ವಸತಿನಿಬಿಡ ಪ್ರದೇಶವಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು ಸಾಲುಗಟ್ಟಿ ನಿಂತಿವೆ. ಕಾಂಕ್ರೀಟ್ ರಸ್ತೆ ಇದ್ದರೂ, ಸ್ಥಳಾವಕಾಶದ ಕೊರತೆಯಿಂದಾಗಿ ಘನವಾಹನ ಬಂದಾಗ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಂಚಾರ ದಟ್ಟಣೆಯ ಸಂಕಷ್ಟ

ಉಳ್ಳಾಲ ಪೇಟೆ-ಕೋಟೆಪುರ ರಸ್ತೆಯ ಸ್ಥಿತಿಯೂ ಕುಂಪಲದಂತೆಯೇ ಇದೆ. ಇಲ್ಲಿ ಕಡಲ ಕಿನಾರೆಯ ಮಾರ್ಗ (ಸಿ. ರಸ್ತೆ) ಮತ್ತು ಕೋಡಿ ಮಾರ್ಗ (ಡಿ. ರಸ್ತೆ) ಎಂದು ಎರಡು ಪ್ರಮುಖ ದಾರಿಗಳಿವೆ. ಈ ಎರಡೂ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಡಿ. ರಸ್ತೆಯ ಇಕ್ಕೆಲಗಳಲ್ಲಿ ಹಳೆಯ ವಾಣಿಜ್ಯ ಕಟ್ಟಡಗಳು, ಧಾರ್ಮಿಕ ಕೇಂದ್ರಗಳು ಮತ್ತು ಶಾಲೆಗಳಿರುವುದರಿಂದ, ದೊಡ್ಡ ವಾಹನಗಳು ಸಂಚಾರ ಸವಾಲಾಗಿದೆ.

ಅಭಿವೃದ್ಧಿಗೆ ಅಡ್ಡಿಯೇನು?

ಈ ರಸ್ತೆಗಳ ಅಭಿವೃದ್ಧಿಗೆ ಕೇವಲ ಕಾಮಗಾರಿಯಷ್ಟೇ ಅಲ್ಲ, ಜಮೀನು ಮತ್ತು ಕಟ್ಟಡ ಸ್ವಾಧೀನದ ದೊಡ್ಡ ಸವಾಲನ್ನು ಒಳಗೊಂಡಿದೆ. ಇಂತಹ ದಟ್ಟಣೆಯ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ದೊಡ್ಡ ಮಟ್ಟದ ಪರಿಹಾರಧನ ಅಗತ್ಯವಿದ್ದು, ಸರ್ಕಾರದಿಂದ ಭಾರಿ ಅನುದಾನ ನಿರೀಕ್ಷಿಸುವುದು ಕಷ್ಟಕರ. ಹೀಗಾಗಿ, ಸ್ಥಳೀಯರು ಸ್ವಇಚ್ಛೆಯಿಂದ ಜಾಗ ಬಿಟ್ಟುಕೊಟ್ಟರೆ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಅಬ್ಬಕ್ಕ ವೃತ್ತದಿಂದ ಕೋಡಿ ಕೋಟೆಪುರ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ರಸ್ತೆ ಬದಿಯ ಕಟ್ಟಡಗಳ ಮೆಟ್ಟಿಲುಗಳನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾಗ ಬಿಟ್ಟುಕೊಟ್ಟರೆ ರಸ್ತೆ ಅಗಲೀಕರಣ ಸುಲಲಿತವಾಗಲಿದೆ.

ಕುಂಪಲ ರಸ್ತೆ 47 ವರ್ಷಗಳ ಹಳೆಯದಾಗಿದ್ದು, ಈ ಭಾಗ ಭಾರೀ ಅಭಿವೃದ್ಧಿಯಿಂದಾಗಿ ಇಂದು ವಾಹನ ಸಂಚಾರಕ್ಕೆ ರಸ್ತೆ ಸಾಕಾಗುತ್ತಿಲ್ಲ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಭೂಸ್ವಾಧೀನಕ್ಕೆ ಸರ್ಕಾರ ದೊಡ್ಡ ಮೊತ್ತದ ಅನುದಾನ ಮೀಸಲಿಡಬೇಕಿದ್ದು, ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು.

ಕುಂಪಲ ರಸ್ತೆ ಮೇಲ್ದರ್ಜೆಗೇರಿಸುವಂತೆ ಗ್ರಾ.ಪಂ. ಅವಧಿಯಲ್ಲೂ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಪುರಸಭೆಯ ಸಾಮಾನ್ಯ ಸಭೆಯಲ್ಲೂ ಈ ಕುರಿತು ನಿರ್ಣಯ ಕೈಗೊಂಡು, ಜಿಲ್ಲಾಧಿಕಾರಿಗಳ ಮೂಲಕ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.