ಉಡುಪಿಯ ಅಭಿರಾಮ ಧಾಮ ಕಲಾವೇದಿಕೆಯಲ್ಲಿ ಕುಮಾರವ್ಯಾಸ ಜಯಂತಿ ಆಚರಿಸಲಾಯಿತು. ಡಾ. ಸುದರ್ಶನ ಭಾರತೀಯ ಪಿ.ವಿ., ಸತೀಶಕುಮಾರ್​ ಕೆಮ್ಮಣ್ಣು, ಡಾ. ರಾಘವೇಂದ್ರ ರಾವ್​ ಪಡುಬಿದ್ರಿ, ಮಟ್ಟು ಕೃಷ್ಣಕುಮಾರ್​, ಡಾ. ಪ್ರಫುಲ್ಲಾ ಜಿ.ಭಟ್​ ಇತರರಿದ್ದರು. 
ಉಡುಪಿ

ಗಮಕ ಕಲೆಯಿಂದ ಅಂತರಂಗ, ಬಹಿರಂಗ ಶುದ್ಧಿ

* ಡಾ. ಸುದರ್ಶನ ಭಾರತೀಯ ಪಿ.ವಿ. ಅಭಿಪ್ರಾಯ

* ಉಡುಪಿಯಲ್ಲಿ ಕುಮಾರವ್ಯಾಸ ಜಯಂತಿ ಉದ್ಘಾಟನೆ

ಉಡುಪಿ: ಕಾವ್ಯದ ನೈಜ ಸೌಂದರ್ಯ ಅರ್ಥಮಾಡಿಕೊಳ್ಳಲು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ  ಸಹಕಾರಿಯಾಗುತ್ತದೆ. ಗಮಕ ಕಲೆಯಿಂದ ಅಂತರಂಗದ ಹಾಗೂ ಬಹಿರಂಗದ ಶುದ್ಧಿ ಏಕಕಾಲಕ್ಕೆ ಆಗುತ್ತದೆ ಎಂದು ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ. ಸುದರ್ಶನ ಭಾರತೀಯ ಪಿ.ವಿ. ಅಭಿಪ್ರಾಯಪಟ್ಟರು.
ಉಡುಪಿಯ ಗುಂಡಿಬೈಲಿನ ಅಭಿರಾಮ ಧಾಮ ಕಲಾವೇದಿಕೆಯಲ್ಲಿ ಕರ್ನಾಟಕ ಗಮಕಕಲಾ ಪರಿಷತ್​ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ (ಜ.4) ಆಯೋಜಿಸಿದ್ದ ಕುಮಾರವ್ಯಾಸ ಜಯಂತಿ ಮತ್ತು ಗಮಕ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನಸ್ಸು ಅರಳಿಸುವ ಕಾವ್ಯ
ಉಡುಪಿ ಗಮಕಕಲಾ ಪರಿಷತ್​ ಅಧ್ಯಕ್ಷ ಸತೀಶಕುಮಾರ್​ ಕೆಮ್ಮಣ್ಣು ಮಾತನಾಡಿ, ಕುಮಾರವ್ಯಾಸನ ಕಾವ್ಯವು ಸಹೃದಯರ ಮನಸ್ಸನ್ನು ಅರಳಿಸುತ್ತದೆ. ಮಹಾಭಾರತದ ಪಾತ್ರಗಳನ್ನು ಆತ ಚಿತ್ರಿಸಿದ ಬಗೆ ಅನನ್ಯ. ಆತನ ಕರ್ನಾಟ ಭಾರತ ಕಥಾಮಂಜರಿಯನ್ನು ಗಮಕದ ಮೂಲಕ ವ್ಯಕ್ತಪಡಿಸಿದಾಗ ಆಗುವ ಆನಂದ ಅವರ್ಣನೀಯ ಎಂದರು.

ವಿಶೇಷ ಉಪನ್ಯಾಸ

ಗಮಕ ವ್ಯಾಖ್ಯಾನಕಾರ ಡಾ. ರಾಘವೇಂದ್ರ ರಾವ್​ ಪಡುಬಿದ್ರಿ 'ಕಾವ್ಯರಸಿಕರ ಕಾಮಧೇನು-ಕುಮಾರವ್ಯಾಸ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಕುಮಾರವ್ಯಾಸ ಜಯಂತಿ ನಿಮಿತ್ತ ಗಮಕಕಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕುಮಾರವ್ಯಾಸ ಭಾರತದ 'ಗುರುದಕ್ಷಿಣೆ' ಕಥಾಭಾಗದ ಗಮಕವಾಚನ ಮಾಡಿದರು. ವಿದ್ಯಾರ್ಥಿಗಳಿಗೆ ಗಮಕ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಗಮಕ ವಾಚನದ ಹಿರಿಯ ವ್ಯಾಖ್ಯಾನಕಾರರಾದ ಗಣಪತಿ ಪದ್ಯಾಣ ಮತ್ತು ಮುಳಿಯ ಶಂಕರ ಭಟ್​ ಅವರಿಂದ ಕನ್ನಡ ಭಾಗವತದ ಗೋವರ್ಧನೋದ್ಧರಣ ಕಥಾಭಾಗದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ನಡೆಯಿತು.
ಗಮಕಕಲಾ ಪರಿಷತ್​ನ ಸದಸ್ಯ ಮಟ್ಟು ಕೃಷ್ಣಕುಮಾರ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ಡಾ. ಪ್ರಫುಲ್ಲಾ ಜಿ.ಭಟ್​ ವಂದಿಸಿದರು.