ಕೃಷ್ಣ ಮಠದಲ್ಲಿ ಪ್ರಾರ್ಥನೆ ನಡೆಯಿತು.
ಉಡುಪಿ : ಹೋಳಿ ಹುಣ್ಣಿಮೆಯ ಪ್ರಯುಕ್ತ ಕೃಷ್ಣ ಮಠದಿಂದ ಕಡಿಯಾಳಿ ದೇವಸ್ಥಾನಕ್ಕೆ ಹೋಳಿ ಬಣ್ಣದ ಮೆರವಣಿಗೆ ಸೋಮವಾರ ಸಾಯಂಕಾಲ ನಡೆಯಿತು.
ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ದೇವರೆದುರು ಪ್ರಾರ್ಥಿಸಿ ನೀಡಿದ ಬಣ್ಣಗಳು ಹಾಗೂ ಅಷ್ಟ ಮಠಗಳಿಂದ ಪಡೆದ ಬಣ್ಣಗಳನ್ನು ಪರ್ಯಾಯ ಶಿರೂರು ಮಠದ ಪಾರುಪತ್ತೆಗಾರರು, ಕೊಟ್ಟಾರಿಗಳು, ವಿದ್ವಾಂಸರು ಮೆರವಣಿಗೆಯಲ್ಲಿ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಣ್ಣವನ್ನು ಪ್ರಸಾದ ರೂಪದಲ್ಲಿ ಕೃಷ್ಣ ಮಠಕ್ಕೆ ವಾಪಾಸು ತರಲಾಯಿತು.
ರಾತ್ರಿ ಮಠದಲ್ಲಿ ನಿತ್ಯೋತ್ಸವದ ಬಳಿಕ ರಥಬೀದಿಯ ಕಟ್ಟೆಯಲ್ಲಿ ರತಿ ಮನ್ಮಥ ಚಿತ್ರಕ್ಕೆ ಪೂಜೆ ಮಾಡಿ ಅದರಲ್ಲಿ ಮನ್ಮಥ ಚಿತ್ರವನ್ನು ಹರಿದು ಅಗ್ನಿಗೆ ಆಹುತಿ ಕೊಡುವಂತಹ ಹೋಳಿಕಾ ದಹನ ಕಾರ್ಯಕ್ರಮ ನಡೆಯಿತು. ಸ್ವಾಮೀಜಿಯವರು ಬಣ್ಣವನ್ನು ಹಚ್ಚಿಕೊಂಡು ಭಕ್ತರಿಗೆ ವಿತರಿಸಿದರು.
ಮಂಗಳವಾರ ಹುಣ್ಣಿಮೆ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸೋಮವಾರ ಮಠದಲ್ಲಿ ಹೋಳಿ ಹಬ್ಬ ಆಚರಿಸಲಾಯಿತು.