ಶೀರೂರು ಮಠಾಧೀಶ ಶ್ರೀ ವೇದವರ್ಧನ ಶ್ರೀಪಾದರು ಮಾತನಾಡಿದರು.
ಉಡುಪಿ: ಕಲಿಯುಗದಲ್ಲಿ ಕೃಷ್ಣ ಮಂತ್ರ ಜಪ ಹೆಚ್ಚು ಲದಾಯಕ. ಹೀಗಾಗಿ ನೂರಾರು ಭಕ್ತರು ಮಠಕ್ಕೆ ಬಂದು ಕೃಷ್ಣ ಮಂತ್ರ ಉಪದೇಶ ಪಡೆಯುತ್ತಾರೆ. ಕೃಷ್ಣ ಮಂತ್ರ ಬರೆಯುವುದರಿಂದಲೂ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ಶ್ರೀಕೃಷ್ಣ ಮಠದಲ್ಲಿ ಕೃಷ್ಣಮಂತ್ರ ಜಪ-ಲೇಖನ ಯಜ್ಞ ಪ್ರಾರಂಭಿಸಲಾಗುವುದು ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ಶ್ರೀಪಾದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾರಂಭದಲ್ಲಿ ಶ್ರೀಕೃಷ್ಣ ಮಂತ್ರ ಉಪದೇಶ ನೀಡಲಾಗುವುದು. ನಂತರ ಭಕ್ತರು ಯಾವುದಾದರು ದುಶ್ಚಟದಿಂದ ದೂರವಿರುವ ಸಂಕಲ್ಪದೊಂದಿಗೆ ಲೇಖನ ಯಜ್ಞವನ್ನು ಆರಂಭಿಸಬಹುದು. ನಿಗದಿತ ದಿನದಂದು ಮಠಕ್ಕೆ ಬಂದು ಕೃಷ್ಣನಿಗೆ ಪುಸ್ತಕವನ್ನು ಅರ್ಪಿಸಬಹುದು ಎಂದರು.
ದಿವಾನ್ ಡಾ. ಉದಯ್ ಸರಳತ್ತಾಯ ಮಾತನಾಡಿ, ಮೇ 10ರಂದು ಸಾಯಂಕಾಲ 5.30ಕ್ಕೆ ಕೃಷ್ಣ ಮಂತ್ರ ಜಪ ಲೇಖನ ಯಜ್ಞಕ್ಕೆ ಸಂಬಂಧಪಟ್ಟ ಅಂತರ್ಜಾಲತಾಣ ಮತ್ತು ಲೇಖನ ಹೊತ್ತಿಗೆಯ ಬೆಂಗಳೂರಿನ ಇಸ್ಕಾನ್ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್ ಉದ್ಘಾಟಿಸಲಿದ್ದಾರೆ. ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿದ್ವಾನ್ ಹರಿದಾಸ್ ಭಟ್ ಭಾಗವಹಿಸಲಿದ್ದಾರೆ. ಒಂದು ಪುಸ್ತಕಕ್ಕೆ 100 ರೂ. ಮುದ್ರಣ ವೆಚ್ಚ ತಗುಲಿದೆ. ಇದಕ್ಕೆ ಕಾಣಿಕೆ ಐಚ್ಛಿಕವಾಗಿದೆ. ಒಂದು ಪುಸ್ತಕದಲ್ಲಿ ಸುಮಾರು 7 ಸಾವಿರ ಕೃಷ್ಣ ಮಂತ್ರ ಬರೆಯಬಹುದು. ಸದ್ಯಕ್ಕೆ 1 ಲಕ್ಷ ಪುಸ್ತಕ ಮುದ್ರಣವಾಗಿದೆ ಎಂದರು. ಮಠದ ಮ್ಯಾನೇಜರ್ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.