ಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರವಿರಾಜ ಎಚ್​.ಪಿ. ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಲಾಯಿತು. ಪ್ರಮೋದ್​ ಮಧ್ವರಾಜ್​, ಅಬೀದ್​ ಗದ್ಯಾಳ, ಡಾ. ಹರಿಶ್ಚಂದ್ರ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಯು.ವಿಶ್ವನಾಥ ಶೆಣೈ, ಕುಮಾರ ಪ್ರಸಾದ, ಲಕ್ಷ್ಮಣ ಕೋಲ್ಕಾರ, ಜನಾರ್ದನ ಕೊಡವೂರು ಇತರರಿದ್ದರು. 
ಉಡುಪಿ

ಸಂಗೊಳ್ಳಿ ರಾಯಣ್ಣನಲ್ಲಿತ್ತು ದೈವಿಕ ಶಕ್ತಿ

* ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಅಭಿಪ್ರಾಯ

* ರಂಗಕರ್ಮಿ ರವಿರಾಜ ಎಚ್​.ಪಿ.ಗೆ ಪ್ರಶಸ್ತಿ ಪ್ರದಾನ

ಉಡುಪಿ: ಬ್ರಿಟಿಷರ ವಿರುದ್ಧ ಹೋರಾಡಿದ ಅನೇಕರನ್ನು ಗಲ್ಲಿಗೇರಿಸಿದ್ದಾರೆ. ಆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಜಾಗ ದೈವಿಕ ಶಕ್ತಿ ಹೊಂದಿದೆ. ಆತ ವೀರ ಮರಣ ಹೊಂದಿದ ಶತಮಾನಗಳ ಬಳಿಕ ಆ.15ರಂದು ದೇಶ ಸ್ವತಂತ್ರವಾಯಿತು. ಈ ದಿನ ರಾಯಣ್ಣನ ಜನ್ಮದಿನ. ಜನವರಿ 26 ದೇಶದ ಗಣರಾಜ್ಯೋತ್ಸವ ಹಾಗೂ ಸಂವಿಧಾನ ಅಂಗೀಕಾರಗೊಂಡ ದಿನ. ಇದು ರಾಯಣ್ಣ ನಿಧನವಾದ ದಿನ. ಇದು ರಾಯಣ್ಣ ಅವರಲ್ಲಿದ್ದ ದೈವಿಕ ಶಕ್ತಿಯ ಪ್ರತೀಕವಾಗಿದೆ ಎಂದು ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ತಿಳಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ವತಿಯಿಂದ ಭಾನುವಾರ (ಅ.12) ಸಂಜೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ರಂಗಕರ್ಮಿ, ಸಂಘಟಕ ಉಡುಪಿಯ ರವಿರಾಜ ಎಚ್​.ಪಿ. ಅವರಿಗೆ 'ಸಂಗೊಳ್ಳಿ ರಾಯಣ್ಣ' ಪ್ರಶಸ್ತಿ ವಿತರಿಸಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾತ:ಸ್ಮರಣೀಯ ವ್ಯಕ್ತಿತ್ವ

ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ಜನರಲ್ಲಿ ಕವಿ ಹೃದಯವಿರಬೇಕು. ಪ್ರಾತ:ಸ್ಮರಣೀಯರಾದ ರಾಯಣ್ಣನ ಸ್ವಾಭಿಮಾನ, ಸ್ಫೂರ್ತಿ ಎಲ್ಲರಲ್ಲೂ ಇರಬೇಕು. ನಮ್ಮ ಮಕ್ಕಳಿಗೆ ಇಂತಹ ವೀರಪುರುಷರ ಯಶೋಗಾಥೆ ಹೇಳುವ ಮೂಲಕ ಸದಾ ಸನ್ಮಾರ್ಗದಲ್ಲಿ ಸಾಗುವ ಮನಸ್ಥಿತಿ ಮೂಡಿಸಬೇಕು ಎಂದರು.

ಸಾಹಿತಿ ಹಾಗೂ ಉರಗತಜ್ಞ ಗುರುರಾಜ ಸನಿಲ್​ ಅಭಿನಂದನಾ ಮಾತುಗಳನ್ನಾಡಿದರು. ರಂಜಿನಿ ವಸಂತ್​ ಪ್ರಶಸ್ತಿ ಪತ್ರ ವಾಚಿಸಿದರು.

ವಿದ್ಯುತ್ ಬಟನ್ ಒತ್ತುವ ಮೂಲಕ ರಾಯಣ್ಣನ ಮೂರ್ತಿಗೆ ಪ್ರಮೋದ್ ಮಧ್ವರಾಜ್ ಕ್ಷೀರಾಭಿಷೇಕ ಮಾಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಗಾಂಧಿ ಆಸ್ಪತ್ರೆಯ ಸಂಸ್ಥಾಪಕ ಡಾ. ಹರಿಶ್ಚಂದ್ರ, ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಯು.ವಿಶ್ವನಾಥ ಶೆಣೈ, ಜಿಲ್ಲಾ ಸಂಘಟನೆಯ ಕಾರ್ಯಾಧ್ಯಕ್ಷ ಕುಮಾರ ಪ್ರಸಾದ, ಉಪಾಧ್ಯಕ್ಷ ಲಕ್ಷ್ಮಣ ಕೋಲ್ಕಾರ ಉಪಸ್ಥಿತರಿದ್ದರು.

ರಂಜಿನಿ ವಸಂತ್​ ಮತ್ತು ದೀಪಾ ಕರ್ಕಿ ನಾಡಗೀತೆ ಹಾಡಿದರು. ರಾಜೇಶ್​ ಭಟ್​ ಪಣಿಯಾಡಿ ಸ್ವಾಗತಿಸಿದರು. ಸಂಘಟನೆಯ ಗೌರವಾಧ್ಯಕ್ಷ ಜನಾರ್ದನ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿಯಲ್ಲಿ ಯಾವುದಾದರೂ ವೃತ್ತಕ್ಕೆ ರಾಯಣ್ಣ ಹೆಸರಿಡಬೇಕು ಎಂದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಸತೀಶ ಕೊಡವೂರು ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಿ. ಕಾಳಿಂಗ ರಾವ್​ ಅವರ ಮೊಮ್ಮಗ, ಖ್ಯಾತ ಗಾಯಕ ರಾಜೇಶ ಶಾನಭಾಗ ಬಾರ್ಕೂರು ಅವರಿಂದ ಕನ್ನಡಮಯ ಹಾಡು, ಭಾವಗೀತೆಗಳನ್ನು ಒಳಗೊಂಡ ಸುಮಧುರ ಗಾಯನ ನಡೆಯಿತು.

ರಾಯಣ್ಣನ ಹೆಸರೇ ಒಂದು ಶಕ್ತಿ, ಸ್ವಾಭಿಮಾನ. ಈ ಶ್ರೇಷ್ಠ ಪ್ರಶಸ್ತಿಯನ್ನು ಹೃದಯದಲ್ಲಿಟ್ಟು ಕಾಪಾಡುತ್ತೇನೆ. ಇದು ಸಾಮಾಜಿಕ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ನನ್ನೆಲ್ಲ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಈ ಕ್ಷಣ ಕೃತಜ್ಞತೆ ಸಲ್ಲಿಸುತ್ತೇನೆ.
ರವಿರಾಜ ಎಚ್​.ಪಿ. ಪ್ರಶಸ್ತಿ ಪುರಸ್ಕೃತ ರಂಗಕರ್ಮಿ.