ಉಡುಪಿಯ ಪರ್ಕಳ ಗ್ರಾಮದ ಅಚ್ಯುತ ನಗರದಲ್ಲಿ ಬೀಡಾಡಿ ದನಗಳಿಗೆ ಹಿಂಡಿ ನೀಡುತ್ತಿರುವ ಕೆ.ಆರ್. ಅಶೋಕ್.
ಉಡುಪಿ
ದನಗಳ 'ದಣಿ'ವು ನೀಗಿಸುವ ಅಶೋಕ
* ಬೀಡಾಡಿ ಜಾನುವಾರುಗಳ ಸೇವೆ, ಆರೈಕೆ
* ನಿತ್ಯವೂ ಗೋವುಗಳಿಗೆ ಹಿಂಡಿ ಪೂರೈಕೆ
ಪ್ರಶಾಂತ ಭಾಗ್ವತ ಉಡುಪಿ
ನಮ್ಮ ನಡುವೆಯೇ ಇರುವ ಕೆಲವರು ಪ್ರಾಣಿ-ಪಕ್ಷಿಗಳ ಮೇಲೆ ಅಪಾರ ಒಲುವು-ಪ್ರೀತಿ ಹೊಂದುವ ಮೂಲಕ ಅವುಗಳಿಗೆ ಆಸರೆ ಆಗಿರುವುದನ್ನು ಕಾಣುತ್ತೇವೆ. ಅದರಂತೆಯೇ ಉಡುಪಿಯ ಪರ್ಕಳದ ಕೆ.ಆರ್. ಅಶೋಕ ಎಂಬವರು ಬೀಡಾಡಿ ದನಗಳಿಗೆ ನಿತ್ಯವೂ ನೀರು, ಹಿಂಡಿಯಂತಹ ಅಗತ್ಯ ಆಹಾರ ನೀಡುವ ಮೂಲಕ ಗೋವುಗಳ ಸೇವೆ ಮಾಡುತ್ತಿದ್ದಾರೆ.
ಪರ್ಕಳ ಗ್ರಾಮದ ಅಚ್ಯುತ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅಶೋಕ, 15 ವರ್ಷದಿಂದ ತನ್ನ ಸ್ವಂತ ಖರ್ಚಿನಲ್ಲಿ ಪ್ರತಿದಿನವೂ 25ಕ್ಕೂ ಹೆಚ್ಚು ಬಡ ಗೋವುಗಳಿಗೆ ಆಹಾರ ನೀಡುತ್ತಿದ್ದಾರೆ.
ಸಾರಿಗೆ ಉದ್ಯಮಿ
ಮೂಲತಹ ಸಾಗರ ನಿವಾಸಿಯಾಗಿರುವ ಅವರು ಈ ಮೊದಲು ಸಾರಿಗೆ ಉದ್ಯಮಿಯಾಗಿದ್ದರು. ಅಲ್ಲಿಯೇ 'ಶ್ರೀಗಣೇಶ ಪ್ರಸಾದ್' ಹೆಸರಿನಲ್ಲಿ 4 ಬಸ್ ಹೊಂದಿದ್ದರು. ಆದರೆ, ಉದ್ಯಮದಲ್ಲಿ ನಷ್ಟ ಆಗಿದ್ದರಿಂದ ಸಾರಿಗೆ ಉದ್ಯಮ ಕೈಬಿಟ್ಟರು. ಬಳಿಕ ಜೀವನ ನಿರ್ವಹಣೆಗಾಗಿ ಉಡುಪಿಯ ಪರ್ಕಳಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದರು. ಈ ಸಂದರ್ಭದಲ್ಲಿ ಮನೆಯ ಮುಂಭಾಗದ ರಸ್ತೆಯಲ್ಲಿ ಬರುವ ಒಂದೆರಡು ದನಗಳಿಗೆ ನೀರು, ಕಲಗಚ್ಚು ಕೊಡುತ್ತಿದ್ದರು. ಇದೀಗ ಆ ಕಾಯಕ ನಿತ್ಯದ ಸೇವೆಯಾಗಿದ್ದು, 25ಕ್ಕೂ ಹೆಚ್ಚು ಗೋವುಗಳಿಗೆ ಆಸರೆಯಾಗಿದ್ದಾರೆ.
ಜೀವನಕ್ಕೆ ಹೆಣ್ಣು ಮಕ್ಕಳೇ ಆಸರೆ
ಅಶೋಕ್ ಪತ್ನಿ ಶಶಿಕಲಾ ಅವರ ತವರುಮನೆ ಮಲ್ಪೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಓರ್ವಳಿಗೆ ವಿವಾಹವಾಗಿದೆ. ಒಬ್ಬಳು ಹೈದರಾಬಾದ್ನಲ್ಲಿ ಇಂಜಿನಿಯರ್, ಇನ್ನೊಬ್ಬಳು ಕೊಯಮುತ್ತೂರಿನಲ್ಲಿದ್ದು ಹೋಟೆಲ್ ಮೆನೇಜ್ಮೆಂಟ್ ಮುಗಿಸಿದ್ದಾರೆ. ತಂದೆ-ತಾಯಿಯ ಜೀವನ ನಿರ್ವಹಣೆಗೆ ಈ ಹೆಣ್ಣುಮಕ್ಕಳೇ ಆಸರೆಯಾಗಿದ್ದಾರೆ. ಮಕ್ಕಳು ನೀಡುವ ಹಣದಲ್ಲೇ ಗೋವುಗಳಿಗೂ ಆಹಾರ ತಂದು ನೀಡುತ್ತಾರೆ. ಜಾನುವಾರುಗಳಿಗೆ ಸಣ್ಣಪುಟ್ಟ ಗಾಯ, ಆನಾರೋಗ್ಯ ಆದರೂ ಸಹ ಔಷಧಗಳನ್ನು ನೀಡಿ ಆರೈಕೆ ಮಾಡುತ್ತಾರೆ. ಅವರ ಈ ಕಾರ್ಯ ಹೃದಯ ಶ್ರೀಮಂತಿಕೆಗೆ ನಿದರ್ಶನವಾಗಿದೆ.
"
ನನಗೆ ಯಾವುದೇ ಆದಾಯವಿಲ್ಲ. ನನಗೀಗ 67 ವರ್ಷ. ನನ್ನ ಹಾಗೂ ಪತ್ನಿಯ ಜೀವನಕ್ಕೆ ಮಕ್ಕಳಿಂದ ಆರ್ಥಿಕ ನೆರವು ಲಭಿಸುತ್ತಿದೆ. 15 ವರ್ಷದಿಂದ ನಿತ್ಯವೂ ಬೀಡಾಡಿ ದನಗಳಿಗೆ ಆಹಾರ ನೀಡುತ್ತಿದ್ದೇನೆ. ಇತ್ತೀಚೆಗೆ ಅವುಗಳಿಗೆ ಅಗತ್ಯ ಆಹಾರ ಪೂರೈಸಲು ಹಣಕಾಸಿನ ತೊಂದರೆ ಆಗುತ್ತಿದೆ. ನನಗೆ ತೊಂದರೆ ಇಲ್ಲ. ಆಸಕ್ತ ಗೋಪ್ರೇಮಿಗಳು ವಿಚಾರಿಸಿ ಸಹಾಯ ಮಾಡಿದರೆ ಗೋಸೇವೆ ಮುಂದುವರಿಸಲು ಸಹಾಯವಾಗುತ್ತದೆ. ನನ್ನ ಮೊ.ಸಂ. 8088574803 ಯುಪಿಐ ಮೂಲಕ ಹಣ ನೀಡಬಹುದು.
"
ಹಿರಿಯರಾದ ಕೆ.ಆರ್. ಅಶೋಕ್ ಅವರ ಗೋಸೇವೆ ಕಾರ್ಯ ನಿಜಕ್ಕೂ ಮಾದರಿ. ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದುಕೊಂಡು ಸ್ವತಹ ಕಷ್ಟದಲ್ಲಿದ್ದರೂ ಸಹ ಅವರು ಬೀಡಾಡಿ ಗೋವುಗಳಿಗೆ ಸ್ವಂತ ಖರ್ಚಿನಲ್ಲಿ ದಿನವೂ ಆಹಾರ ನೀಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ದಾನಿಗಳು ಕಿಂಚಿತ್ ನೆರವು ನೀಡಿದರೆ ಗೋಸೇವೆ ಮುಂದುವರಿಸಲು ಅವರಿಗೆ ಅನುಕೂಲ ಆಗಲಿದೆ.