ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಅಶೋಕ್ ಕೊಡವೂರು ಮಾತನಾಡಿದರು. ರತ್ನಾಕರ್ ಪೂಜಾರಿ, ಸ್ಟೀವನ್ ಡಿಸೋಜ, ಪ್ರಖ್ಯಾತ್ ಶೆಟ್ಟಿ, ಅಬ್ದುಲ್ ರಹಿಮಾನ್ ಪಡ್ಪುರ ಇತರರಿದ್ದರು.
* ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಸೂಚನೆ
* ಉಡುಪಿಯಲ್ಲಿ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯಕಾರಿಣಿ
ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆದೇಶ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ಅವರ ಸೂಚನೆಯಂತೆ ರಾಜ್ಯಾದ್ಯಂತ ಕಾರ್ಮಿಕ ಘಟಕಗಳ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಸಮಿತಿ ರಚಿಸಲಾಗುವುದು. ತನ್ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕು. ಅಲ್ಲದೆ, ಮುಂಬರುವ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು ಸೂಚಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಉಡುಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದರು.
ಸನ್ಮಾನ, ಆದೇಶ ಪತ್ರ
ಪಕ್ಷ ಸಂಘಟನೆ ಹೆಚ್ಚು ಶ್ರಮಿಸಿದ ಮತ್ತು ಘಟಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಾರ್ಮಿಕ ಘಟಕದ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಉಸ್ತುವಾರಿ ಅಬ್ದುಲ್ ರಹಿಮಾನ್ ಪಡ್ಪುರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಮಿಕ ಘಟಕದಿಂದ ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕ ಘಟಕದ ಕೆಲವು ಬ್ಲಾಕ್ ಅಧ್ಯಕ್ಷರಿಗೆ ಆದೇಶ ಪತ್ರ ನೀಡಲಾಯಿತು.
ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ರತ್ನಾಕರ್ ಪೂಜಾರಿ, ಉಪಾಧ್ಯಕ್ಷ ಸ್ಟೀವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಮುಖಂಡರು, ಬ್ಲಾಕ್ನ ಅಧ್ಯಕ್ಷರು, ಜಿಲ್ಲಾ ತಾಲೂಕು, ಗ್ರಾಪಂನ ಮಾಜಿ ಸದಸ್ಯರು, ಕಾರ್ಮಿಕ ಘಟಕದ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.