ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು
ಕುಂದಾಪುರ: ಕೊಟೇಶ್ವರದ ಮಹತೋಭಾರಾ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮ ರಥೋತ್ಸವ ‘ಕೊಡಿ ಹಬ್ಬ’ ಗುರುವಾರ ಶ್ರದ್ಧಾಭಕ್ತಿಯಿಂದ ವೈಭವದಿಂದ ನಡೆಯಿತು. ಊರು, ಪರವೂರಿನ ಸಾವಿರಾರು ಭಕ್ತರು ಪಾಲ್ಗೊಂಡು ರಥೋತ್ಸವವನ್ನು ಕಣ್ತುಂಬಿಕೊಂಡರು.
ಗುರುವಾರ ನಸುಕಿನಿಂದಲೇ ಧಾರ್ಮಿಕ ಆಚರಣೆಯಲ್ಲಿ ತೊಡಗಿದ ಭಕ್ತರು, ಬೆಳಗ್ಗೆ 11.21ರ ಮಕರ ಲಗ್ನ ಸುಮುಹೂರ್ತದಲ್ಲಿ ನಡೆದ ಮನ್ಮಹಾರಥೋತ್ಸವದ ಆರೋಹಣವನ್ನು ನೋಡಿ ಪುನೀತರಾದರು. ತಂತ್ರಿ ಪ್ರಸನ್ನ ಕುವಾರ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಸುತ್ತಕ್ಕಿ ಸೇವೆ: ಸೂರ್ಯೋದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ಧ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚೆಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬೆಳಗ್ಗೆ ದೇವಸ್ಥಾನದಿಂದ ಋತ್ವಿಜರು, ಪಂಚವಾದ್ಯಗಳು, ಪಾರಂಪರಿಕ ಸೂರ್ಯ ವಾದ್ಯ, ಚೆಂಡೆ, ತಟ್ಟಿರಾಯ ಸಹಿತ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ, ಕೋಟಿಲಿಂಗೇಶ್ವರ ಗೋಳೆ (ಮುಖವಾಡ), ತಾಂಡವೇಶ್ವರ ಹಾಗೂ ಬಿದಿರಿನ ಕೊಡಿಯನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಲಾಯಿತು. ಬಳಿಕ ಹಣ್ಣುಕಾಯಿ ಸೇವೆ ಸಲ್ಲಿಸಿ ಮಂಗಳಾರತಿ ನೆರವೇರಿಸಲಾಯಿತು. ನೆರೆದಿದ್ದ ಸಹಸ್ರಾರು ಭಕ್ತರು ರಥಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ವೈಭವದ ರಥೋತ್ಸವ ಸಂಪನ್ನಗೊಂಡಿತು.
ಹರಿದು ಬಂದ ಭಕ್ತ ಸಾಗರ; ಕೋಟೇಶ್ವರದ ಬೀದಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಉಚಿತ ಪಾನಕ ಹಾಗೂ ಪಾನೀಯ ವ್ಯವಸ್ಥೆ ವಾಡಲಾಗಿತ್ತು. ಶನಿವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ವಾಹನ ಹಾಗೂ ಜನರ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು.
ಕುಂದಾಪುರ ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಗೋಪಾಲಕೃಷ್ಣ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುವಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಸಮಿತಿ ಸದಸ್ಯರು ಮೊದಲಾದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕುಂದಾಪುರ ಉಪವಿಭಾಗ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ಕುಂದಾಪುರದ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಉಪನಿರೀಕ್ಷಕರಾದ ನಂಜಾ ನಾಯ್ಕ, ಪುಷ್ಪಾ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವಾಡಲಾಗಿತ್ತು.
ಕಬ್ಬಿನ ಕೊಡಿ ಕೊಂಡೊಯ್ದ ಭಕ್ತರು
ಕೊಡಿ ಹಬ್ಬಕ್ಕೆ ಬರುವ ನವವಿವಾಹಿತರ ಬದುಕಿನ ಕುಡಿಯೊಡಿಯುತ್ತದೆ ಎನ್ನುವ ನಂಬಿಕೆ ಇಲ್ಲಿಯದು. ನವದಂಪತಿಗಳು ಕೋಟಿತೀರ್ಥದಲ್ಲಿ ಸ್ನಾನ ವಾಡಿ ದೇವರ ದರ್ಶನ ಪಡೆದು ‘ಕಬ್ಬಿನ ಕೊಡಿ’ಯನ್ನು ಮನೆಗೆ ಕೊಂಡೊಯ್ದರು. ಸಂಜೆ ಬ್ರಹ್ಮರಥದ ಅವರೋಹಣ ನಡೆಸಿ ಉತ್ಸವ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಜಾತ್ರೆ ಅಂಗವಾಗಿ ವಿವಿಧ ಸಂಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು.