ರೋಡ್ ಪೂರ್ಣಗೊಂಡ ಮಡ್ಯಾರ್ ರಾಮಾಶ್ರಯ ರಸ್ತೆ.
ಉಳ್ಳಾಲ: ರಸ್ತೆ ಕಾಮಗಾರಿ ಆರಂಭಗೊಂಡರೂ ಅಧ್ಯಕ್ಷರು ಮತ್ತು ಕೌನ್ಸಿಲರ್ ನಡುವಿನ ರಾಜಕೀಯ ಮೇಲಾಟದಿಂದಾಗಿ ಅರ್ಧಕ್ಕೆ ನಿಂತಿದ್ದ ಕಾಮಗಾರಿ ಸ್ಥಳೀಯ ಕೌನ್ಸಿಲರ್ ನಡೆಸಿದ ಹೋರಾಟಕ್ಕೆ ಶಾಸಕರು ಸಾಥ್ ನೀಡಿದ ಫಲವಾಗಿ ಕೊನೆಗೂ ಪೂರ್ಣಗೊಂಡಿದೆ.
ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟೆಕಾರ್-ದೇರಳಕಟ್ಟೆ ಮುಖ್ಯ ರಸ್ತೆಯ ನಡುವೆ ಸಿಗುವ 11ನೇ ವಾರ್ಡ್‌ನ ನಡಾರ್ ಮಡ್ಯಾರ್ ರಾಮಾಶ್ರಯ ಒಳರಸ್ತೆ 750 ಮೀಟರ್ ಉದ್ದವಿದ್ದು, ಈ ರಸ್ತೆಯ ಮಧ್ಯಭಾಗದಲ್ಲಿ ಹಿಂದೆ 90 ಮೀಟರ್‌ನಷ್ಟು ಕಾಂಕ್ರೀಟ್ ಕಾಮಗಾರಿ ನಡೆದಿತ್ತು. ಈ ಬಾರಿ ಮುಖ್ಯ ರಸ್ತೆಯಿಂದಲೇ 95 ಮೀಟರ್‌ವರೆಗೆ ಕಾಂಕ್ರೀಟ್ ಹಾಕುವ ನಿಟ್ಟಿನಲ್ಲಿ ಪಪಂ ಅಧ್ಯಕ್ಷರ ನಿಧಿಯಿಂದ 5 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿತ್ತು.
ಕಳೆದ ತಿಂಗಳು ಗುತ್ತಿಗೆದಾರ ಕಾಮಗಾರಿ ಆರಂಭಿಸಿ, ಮುಖ್ಯರಸ್ತೆ ಬಳಿ 72 ಮೀಟರ್‌ವರೆಗೆ ಬೆಡ್ ಹಾಕಿದ್ದರು. ಅದಾದ ಬಳಿಕ ಮಧ್ಯಭಾಗದಲ್ಲಿ ನಾಲ್ಕು ಮನೆಗಳಿರುವ 36 ಮೀಟರ್‌ನಷ್ಟು ರಸ್ತೆಯನ್ನು ಹಾಗೇ ಬಿಟ್ಟು, ನಂತರದ ಭಾಗದಲ್ಲಿ 23 ಮೀಟರ್ ರಸ್ತೆ ಕಾಮಗಾರಿ ನಡೆಸಲು ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಕಾಮಗಾರಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಅಧ್ಯಕ್ಷರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇದರ ಬೆನ್ನಲ್ಲೇ ಅಧ್ಯಕ್ಷರ ಸೂಚನೆಯಂತೆ ಬೆಡ್ ಹಾಕಿದ ಸ್ಥಿತಿಯಲ್ಲೇ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಬಗ್ಗೆ ’ವಿಜಯವಾಣಿ’ ಮೇ 21ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಶಾಸಕ ಯು.ಟಿ.ಖಾದರ್ ಕೌನ್ಸಿಲರ್ ಬಳಿ ಮಾಹಿತಿ ಪಡೆದು, ಕಾಮಗಾರಿ ಆರಂಭಿಸಿದ್ದ ರಸ್ತೆಯನ್ನು ತಕ್ಷಣ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಿದ್ದು, ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟ್ ಹಾಕಲಾಗಿದೆ.
ನಮಗೆ ರಾಜಕೀಯಕ್ಕಿಂತ ಅಭಿವೃದ್ಧಿ ಮುಖ್ಯ, ಆದರೆ ತನ್ನ ವಾರ್ಡ್‌ನಲ್ಲೇ ರಸ್ತೆ ಕಾಮಗಾರಿಯಲ್ಲಿ ರಾಜಕೀಯ ತಂದು ಗೊಂದಲ ಸೃಷ್ಟಿಸಲಾಗಿತ್ತು. ಇದರ ವಿರುದ್ಧ ಸಾಮಾನ್ಯ ಸಭೆಯಲ್ಲೂ ಧ್ವನಿ ಎತ್ತಿದ್ದರಿಂದ ಅನುದಾನವನ್ನೇ ಬೇರೆಡೆ ವರ್ಗಾಯಿಸಲಾಗಿತ್ತು. ಆದರೆ ಶಾಸಕರು ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಕಾಮಗಾರಿ ನಡೆಸುವಂತೆ ಮಾಡಿದ್ದಾರೆ. ‘ವಿಜಯವಾಣಿ’ ಪತ್ರಿಕೆಯೂ ವರದಿಯ ಮೂಲಕ ಬೆಂಬಲ ನೀಡಿತ್ತು.