ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ಎಚ್.ವಿ. ಹಂದೆ.
* ಉಡುಪಿ ಜಿಲ್ಲೆ ಕೋಟ ಮೂಲದ ವೈದ್ಯ
* ಸಮರ್ಥ ರಾಜಕಾರಿಣಿ, ಸಾಹಿತಿ
ಉಡುಪಿ: ಕೋಟ ಹಂದಟ್ಟಿನ ಪ್ರಸಿದ್ಧ ಹಂದೆ ಮನೆತನದ 99ರ ಪ್ರಾಯದ ಹಿರಿಯ ವೈದ್ಯ ಡಾ. ಎಚ್.ವಿ. ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ 2026ರ ಪ್ರತಿಷ್ಠಿತ 'ಪದ್ಮಶ್ರೀ' ಪುರಸ್ಕಾರ ಲಭಿಸಿದೆ.
ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ಕೋಟದ ಮಾದಪ್ಪ ಹಂದೆ ಪುತ್ರರಾದ ಅವರು, ವೈದ್ಯಕೀಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದವರಾಗಿದ್ದಾರೆ.
ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ತಮಿಳುನಾಡಿನ ಚೆನ್ನೈನಲ್ಲಿಯೇ ಹಂದೆ ಹಾಸ್ಪಿಟಲ್ ಸ್ಥಾಪಿಸಿ, ವೈದ್ಯರಾಗಿ ಸೇವೆ ಸಲ್ಲಿಸಿದರು. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯದಲ್ಲಿ ಕುಶಲತೆ ಸಾಧಿಸಿದ್ದ ಅವರು, ಮುಖ್ಯಮಂತ್ರಿ ಎಂಜಿಆರ್ ಅನಾರೋಗ್ಯಕ್ಕೊಳಗಾಗಿದ್ದ ಸಂದರ್ಭದಲ್ಲಿ ಸರ್ಕಾರ ಮುನ್ನಡೆಸಿ ಗಮನ ಸೆಳೆದಿದ್ದರು.
ಕಂಬ ರಾಮಾಯಣವನ್ನು ಇಂಗ್ಲಿಷ್ ಹಾಗೂ ತಮಿಳಿಗೆ ಭಾಷಾಂತರಿಸಿರುವ ಡಾ. ಹಂದೆ, ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಕೋಟದ ಹಂದೆ ಮನೆತನದಲ್ಲಿ ಸಾಧಕರು ಅನೇಕರು. ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ನಮ್ಮ ಹಿರಿಯ ಸಹೋದರ ಎಚ್.ವಿ. ಹಂದೆ 'ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆ ಆಗಿರುವುದು ನಮ್ಮ ಹಂದೆ ಕುಟುಂಬಕ್ಕೆ, ಊರಿಗೆ ಅಭಿಮಾನದ ಹಾಗೂ ಹೆಮ್ಮೆಯ ಸಂಗತಿ. ಪ್ರತಿಭೆಗೆ ಸಂದ ನಿಜವಾದ ಗೌರವ.