ಉಡುಪಿಯಲ್ಲಿ ಆಯೋಜಿಸಿದ್ದ 'ಕೊಂಕಣಿ ರಂಗಾಂತರಂಗ ತರಬೇತಿ' ಕಾರ್ಯಾಗಾರವನ್ನು ಡಾ. ಸಂಧ್ಯಾ ಪೈ ಉದ್ಘಾಟಿಸಿದರು. ಕಾಸರಗೋಡು ಚಿನ್ನಾ, ಯು.ವಿಶ್ವನಾಥ್ ಶೆಣೈ, ವಸಂತ ನಾಯಕ್, ಶಿವಶಂಕರ್ ಶೇಟ್, ಶಶಿಭೂಷಣ್ ಕಿಣಿ, ಚೇಂಪಿ ರಾಮಚಂದ್ರ ಭಟ್ ಇದ್ದರು.
* ತರಂಗ ಸಂಪಾದಕಿ ಡಾ. ಸಂಧ್ಯಾ ಪೈ ಆಶಯ
* 'ಕೊಂಕಣಿ ರಂಗಾಂತರಂಗ ತರಬೇತಿ' ಉದ್ಘಾಟನೆ
ಉಡುಪಿ: ಕೊಂಕಣಿ ಸಾಹಿತ್ಯ, ಭಾಷೆ, ಸಂಸ್ಕೃತಿ ಉಳಿಸಿ ಬೆಳಸಲು ಕಾರ್ಯಾಗಾರಗಳು ಪೂರಕವಾಗಿವೆ. ಮಕ್ಕಳಿಗೆ ನಮ್ಮ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ, ಜೀವನದ ಮೌಲ್ಯ ಕಲಿಸಿ ಅವರನ್ನು ಸಮಾಜದ ದೊಡ್ಡ ಆಸ್ತಿಯನ್ನಾಗಿ ರೂಪಿಸಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರೂ ಸಹ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದು ಡಾ. ಸಂಧ್ಯಾ ಪೈ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಒಳಕಾಡು ಪದ್ಮಾವತಿ ಸಭಾಸದನದಲ್ಲಿ ಅನಂತ ವೈದಿಕ ಕೇಂದ್ರ ಉಡುಪಿ, ಪ್ರಸಿದ್ಧ ರಂಗಕರ್ಮಿ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ನೇತೃತ್ವದಲ್ಲಿ ಆಯೋಜಿಸಿದ್ದ 2 ದಿನದ 'ಕೊಂಕಣಿ ರಂಗಾಂತರಂಗ ತರಬೇತಿ' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಪುತ್ತೂರಿನ ಲಕ್ಷ್ಮೀಮವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ನಾಯಕ್, ದೈವಜ್ಞ ಬ್ರಾಹ್ಮಣ ಸಮಾಜ ಉಡುಪಿ ಅಧ್ಯಕ್ಷ ಶಿವಶಂಕರ್ ಶೇಟ್, ಕೊಂಕಣಿ ರಂಗಾತರಂಗ ತರಬೇತಿಯ ಸಂಚಾಲಕ ಶಶಿಭೂಷಣ್ ಕಿಣಿ ಉಪಸ್ಥಿತರಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷ ಯು.ವಿಶ್ವನಾಥ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಚಿನ್ನಾ ಅವರು ಶಿಬಿರಾರ್ಥಿಗಳಿಗೆ ರಂಗ ತರಬೇತಿಗಳಾದ ಧ್ವನಿ, ಭಾಷೆಯ ಹಿಡಿತ, ಅಭಿನಯ ಹಾಗೂ ಮುಖಾಅಭಿನಯ, ವಿವಿಧ ಹಾವ-ಭಾವಗಳ ಮೂಲಕ ಅಭಿನಯಿಸುವ ಕಲಾ ಪ್ರಕಾರಗಳನ್ನು ತಿಳಿಸಿದರು. ಸ್ವಯಂ ಅಭಿನಯಿಸಿ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.
ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
"
ಕೊಂಕಣಿ ಭಾಷೆ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಇಂದಿನ ಮಕ್ಕಳಿಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಂಗ ಕ್ಷೇತ್ರದ ಕಲೆ ಉಳಿಸಿ ಬೆಳೆಸುವಲ್ಲಿ ಕೊಂಕಣಿ ಸಮಾಜ ಬಾಂಧವರು ಕೈ ಜೋಡಿಸಬೇಕು. ತಮ್ಮ ಮಕ್ಕಳನ್ನು ಇಂತಹ ತರಬೇತಿ ಶಿಬಿರಗಳಿಗೆ ಕಳುಹಿಸಿ ಅವರು ಸಮಾಜಮುಖಿ ಜೀವನ ನಡೆಸಲು ಆದ್ಯತೆ ನೀಡುವಂತಾಗಬೇಕು.
— ಕಾಸರಗೋಡು ಚಿನ್ನಾ. ಕೊಂಕಣಿ ಅಕಾಡಮಿ ಮಾಜಿ ಅಧ್ಯಕ್ಷ.