ಉಡುಪಿಯ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿದರು. ನವೀನ್ ಲೋಬೊ, ವೆಲ್ಫ್ರೆಡ್ ಡಿಸೋಜಾ, ಪ್ರಕಾಶ್ ನೊರೊನ್ಹಾ, ಸ್ಟೀವನ್ ಕುಲಾಸೋ, ಮೆಲ್ವಿನ್ ನೊರೊನ್ಹಾ ಇದ್ದರು.
* ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾಹಿತಿ
* ಉಡುಪಿಯ ಉದ್ಯಾವರ ಚರ್ಚ್ನ ವಠಾರದಲ್ಲಿ ಕಾರ್ಯಕ್ರಮ
ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿವರ್ಷ ಕೊಂಕಣಿ ಸಾಹಿತ್ಯ, ಕಲೆ ಮತ್ತು ಜಾನಪದ ಈ ಮೂರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುತ್ತ ಬರಲಾಗಿದೆ. ಈ ಬಾರಿ ಏ.26ರಂದು ಸಂಜೆ 5ಕ್ಕೆ ಉಡುಪಿಯ ಉದ್ಯಾವರ ಚರ್ಚ್ನ ವಠಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾಧಕರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತಿಳಿಸಿದರು.
ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ (ಏ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಕಥೋಲಿಕ್ ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮೂವರಿಗೆ ಪ್ರಶಸ್ತಿ
ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲಾ ವಿಭಾಗದಲ್ಲಿ ರಾಮದಾಸ್ ದತ್ತಾತ್ರೇಯ ಗುಲ್ವಾಡಿ, ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು (ಮುರಳೀಧರ್) ಪುತ್ತು ನಾಯ್ಕ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪುಸ್ತಕ ಪುರಸ್ಕಾರ
ಕೊಂಕಣಿ ಕವನ ವಿಭಾಗದಲ್ಲಿ ಕವಿ ಆ್ಯಂಡ್ರೂ ಎಲ್. ಡಿಕುನ್ಹಾ ಅವರ 'ಉಜ್ವಾಡಾಚ್ಯೆ ವೆಂಗೆಂತ್' ಪುಸ್ತಕ, ಕೊಂಕಣಿ ಲೇಖನ ವಿಭಾಗದಲ್ಲಿ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾ ಅವರ 'ಕೊಂಕ್ಣಿ ಸರ್ಕಸ್' ಪುಸ್ತಕ, ಕೊಂಕಣಿ ಸಣ್ಣ ಕಥೆಗಳ ವಿಭಾಗದಲ್ಲಿ ಲೇಖಕ ರಿಚರ್ಡ್ ಅಲ್ವಾರಿಸ್ ಅವರ 'ಫಿತುರಿ' ಪುಸ್ತಕ 2025ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಭಾಜನ ಆಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ನವೀನ್ ಲೋಬೊ, ಉದ್ಯಾವರ ಚರ್ಚ್ನ ಕಾರ್ಯದರ್ಶಿ ವೆಲ್ಫ್ರೆಡ್ ಡಿಸೋಜಾ, ಪ್ರಕಾಶ್ ನೊರೊನ್ಹಾ, ಸ್ಟೀವನ್ ಕುಲಾಸೋ, ಮೆಲ್ವಿನ್ ನೊರೊನ್ಹಾ ಇದ್ದರು.