ಕೋಟ ಶ್ರೀನಿವಾಸ ಪೂಜಾರಿ. ಉಡುಪಿ-ಚಿಕ್ಕಮಗಳೂರು ಸಂಸದ. 
ಉಡುಪಿ

ಕೊಂಕಣ ರೈಲ್ವೆ ವಿಲೀನಕ್ಕೆ ಬೇಕು ಸರ್ಕಾರಗಳ ಸಹಕಾರ

* ಲೋಕಸಭೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್​ ಪ್ರತಿಕ್ರಿಯೆ

* ಉಡುಪಿ ಸಂಸದ ಪೂಜಾರಿ ಲಿಖಿತ ಪ್ರಶ್ನೆಗೆ ಉತ್ತರ

ಉಡುಪಿ: ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನಗೊಳಿಸುವ ಪ್ರಕ್ರಿಯೆಗೆ ಸಂಬಂಧಿತ ರಾಜ್ಯ ಸರ್ಕಾರಗಳ ಸಹಕಾರ ಕೋರಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಪ್ರಸಾರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್​ ಪ್ರತಿಕ್ರಿಯೆ ನೀಡಿದರು.
ದೆಹಲಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ಕೊಂಕಣ ರೈಲ್ವೆ ವಿಲೀನ, ನನೆಗುದಿಗೆ ಬಿದ್ದ ರೈಲ್ವೆ ಹಳಿಗಳ ದ್ವಿಗುಣಗೊಳಿಸುವಿಕೆ, ಕೊಂಕಣ ರೈಲ್ವೆ ನಿಲ್ದಾಣಗಳ ಮೇಲ್ದರ್ಜೆ, ಹೊಸ ರೈಲುಗಳ ಸಂಚಾರ ಆರಂಭಿಸುವಂತೆ ಉಡುಪಿ-&ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದರು.

4 ರಾಜ್ಯದ ಸಹಭಾಗಿತ್ವ

ಕೊಂಕಣ ರೈಲ್ವೆ ಕಾರ್ಪೊರೇಷನ್​ನನ್ನು 1990ರಲ್ಲಿ ರೈಲ್ವೆ ಸಚಿವಾಲಯದೊಂದಿಗೆ ಮಹಾರಾಷ್ಟ್ರ ಗೋವಾ, ಕರ್ನಾಟಕ ಮತ್ತು ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ರೋಹ್​ದಿಂದ, ಕರ್ನಾಟಕದ ತೋಕೂರ್​ವರೆಗೆ ಕೊಂಕಣ ರೈಲ್ವೆ ವಿಸ್ತರಿಸಲಾಗಿದೆ. ರೈಲ್ವೆ ನಿಗಮಕ್ಕೆ ಭಾರತ ಸರ್ಕಾರವು ಶೇ.66.35 ಅನುದಾನ ಒದಗಿಸುತ್ತದೆ. ಮಹಾರಾಷ್ಟ್ರ ಸರ್ಕಾರ ಶೇ.15.11, ಕರ್ನಾಟಕ  ಶೇ.10-.30, ಗೋವಾ 4-.12, ಕೇರಳ 4.-12 ಅನುದಾನ ಒದಗಿಸಿದೆ.  ಹೀಗಾಗಿ ಈ ನಾಲ್ಕು ರಾಜ್ಯಗಳ ನಿರ್ಧಾರಗಳು ವಿಲೀನ ಪ್ರಕ್ರಿಯೆಗೆ ಸಹಕರಿಸಬೇಕಾಗುತ್ತದೆ ಎಂದು ಅಶ್ವಿನಿ ವೈಷ್ಣವ್​ ವಿವರಿಸಿದರು.

ರೈಲ್ವೆ ಸಂಚಾರಗಳ ಮಾಹಿತಿ

ಮಂಗಳೂರು-ಮುಂಬಯಿ ನಡುವೆ ಪ್ರಸ್ತುತ 28 ರೈಲು ಓಡಾಡುತ್ತಿದ್ದು, ಮಂಗಳೂರು ಮಡಗಾಂವ್​ವರೆಗೆ 33 ರೈಲು ಸೇವೆ ಒದಗಿಸಲಾಗಿದೆ. ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ 164 ವಂದೇ ಭಾರತ್​ ರೈಲು ಕಾರ್ಯ ನಿರ್ವಹಿಸುತ್ತಿದೆ. ಅವುಗಳಲ್ಲಿ ಮಹಾರಾಷ್ಟ್ರದಲ್ಲಿ 24, ಕರ್ನಾಟಕ 22, ಗೋವಾದಲ್ಲಿ 4 ಹಾಗೂ ಕೇರಳ ರಾಜ್ಯದಲ್ಲಿ 6 ವಂದೇ ಭಾರತ್​ ರೈಲು ಸಂಚರಿಸುತ್ತಿದೆ. ಅವುಗಳಲ್ಲಿ ಮಂಗಳೂರಿನಿಂದ ಮಡಗಾಂವ್​ ವರೆಗೆ ಚಲಿಸುವ ರೈಲ್ವೆ ಸೇವೆಯೂ ಸೇರಿದೆ ಎಂದು ರೈಲ್ವೆ ಸಚಿವರು ತಿಳಿಸಿದರು.

ಹಳಿಗಳ ದ್ವಿಗುಣ ಕಾರ್ಯ ಆರಂಭ

 ಕೊಂಕಣ ರೈಲ್ವೆ ವ್ಯಾಪ್ತಿಯ 739 ಕಿ.ಮೀ. ಹಳಿಗಳ ಪೈಕಿ ರೋಹಾ-ವೀರ್​ ಮತ್ತು ಮಡಗಾಂವ್​ ವಿಭಾಗಗಳಲ್ಲಿ 55 ಕಿ.ಮೀ. ಹಳಿ ದ್ವಿಗುಣಗೊಳಿಸುವ ಕೆಲಸ ಪೂರ್ಣಗೊಂಡಿದೆ. ಉಳಿದ 684 ಕಿ.ಮೀ. ದ್ವಿಗುಣಗೊಳಿಸುವ ಅಗತ್ಯತೆ ಇದೆ. ಈ ಕುರಿತು ಆಯಾ ರಾಜ್ಯ ಸರ್ಕಾರ ಸಂಪರ್ಕಿಸಲಾಗುತ್ತಿದೆ. ಇದಲ್ಲದೆ, ಮಾರ್ಗದ ಸಾಮರ್ಥ್ಯ ಹೆಚ್ಚಿಸಲು ಸುಮಾರು 263 ಕಿ.ಮೀ. ಹಳಿಗಳ ದ್ವಿಗುಣಗೊಳಿಸಲು ಕೊಂಕಣ ರೈಲ್ವೆ ವತಿಯಿಂದ ಡಿಪಿಆರ್​ ಸಿದ್ಧಪಡಿಸುವ ಕೆಲಸ ನಡೆದಿದೆ. ಈ ಭಾಗಗಳ ಸಂಸದರ ಬೇಡಿಕೆಗಳೂ ಸೇರಿದಂತೆ ಪ್ರಯಾಣಿಕರ ಅನುಕೂಲಗಳಿಗಾಗಿ ಹಲವು ಅಭಿವೃದ್ಧಿ ಕೆಲಸಗಳು ರೈಲ್ವೆ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್​ ಅವರು ಸಂಸದ ಕೋಟ ಪೂಜಾರಿ ಪ್ರಶ್ನೆಗೆ ಉತ್ತರಿಸಿದರು.