ಸಂಸದ ಕೋಟ ಶ್ರೀನಿವಾಸ ಪೂಜಾರಿ ನೂತನ ಲಿಫ್ಟ್ ಉದ್ಘಾಟಿಸಿದರು.
ಉಡುಪಿ: ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಂಡರೆ ಮಾತ್ರ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯಲಿದೆ. ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಕೊಂಕಣ ರೈಲ್ವೆ ವತಿಯಿಂದ ಸುಮಾರು 2.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಲಿಫ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಕೊಂಕಣ ರೈಲ್ವೆಯಲ್ಲಿ ಕರ್ನಾಟಕ, ಕೇರಳ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ಪಾಲುದಾರರಾಗಿದ್ದಾರೆ. ಕೇರಳ ಮತ್ತು ಗೋವಾ ಸರ್ಕಾರ ತಮ್ಮ ಪಾಲಿನ ಷೆೇರುಗಳನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿವೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಮಾತನಾಡಿದ್ದು, ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ರಾಜ್ಯದ ಪಾಲಿನ ಷೇರುಗಳನ್ನು ಶೀಘ್ರವೇ ಕೇಂದ್ರಕ್ಕೆ ಹಸ್ತಾಂತರಿಸುವ ವಿಶ್ವಾಸವಿದೆ. ಮಹಾರಾಷ್ಟ್ರ ಸರ್ಕಾರದ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಬಾರ್ಕೂರು ನಿಲ್ದಾಣಕ್ಕೆ 14 ಕೋಟಿ ರೂ.
ಬಾರ್ಕೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗಾಗಿ 14.50 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡು ತಿಂಗಳೊಳಗೆ ಅನುದಾನ ಮಂಜೂರಾಗುವ ಸಾಧ್ಯತೆಗಳಿದ್ದು, ಶೆಲ್ಟರ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕಾಮಗಾರಿ ಆರಂಭಿಸಲಾಗುವುದು. ಬೆಂಗಳೂರು-&ಕಾರವಾರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಪ್ರಯೋಗಿಕ ಸಮೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಭಾಗಕ್ಕೂ ವಂದೇ ಭಾರತ್ ರೈಲು ಸೇವೆ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಕೇಂದ್ರ ಸರ್ಕಾರ ರೈಲ್ವೇ ಇಲಾಖೆಯಲ್ಲಿ ಮಹತ್ತರದ ಬಲದಾವಣೆಗಳನ್ನು ತರುತ್ತಿದ್ದು, ನಿಲ್ದಾಣಗಳನ್ನು ಉನ್ನತಿಕರಣಗೊಳಿಸುತ್ತಿದೆ. ಇದಕ್ಕೆ ಪೂರಕವಾಗಿ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದ್ವಿಪಥವಾಗಿ ಮೇಲ್ದರ್ಜೆಗೇರಿಸಲು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ (ಕಾರವಾರ) ಆಶಾ ಶೆಟ್ಟಿ, ಗೋವಾದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ದಿಲೀಪ್ ಭಟ್ , ಕಾರವಾರದ ಉಪ ಮುಖ್ಯ ಇಂಜಿನಿಯರ್ ವಿಜಯಕುಮಾರ್, ಕಾರವಾರದ ಸಹಾಯಕ ವಿದ್ಯುತ್ ಇಂಜಿನಿಯರ್ ಪ್ರಶಾಂತ್ ದಿಗ್ಗಾವಿ, ಹಿರಿಯ ಸಿಗ್ನಲ್ ಮತ್ತು ದೂರಸಂಪರ್ಕ ಇಂಜಿನಿಯರ್ ಸುದರ್ಶನ್ ರೆಡ್ಡಿ, ಉಪ ಮುಖ್ಯ ವೈದ್ಯಾಧಿಕಾರಿ ಡಾ. ಸ್ಟೀವನ್ ಜಾರ್ಜ್, ಮಂಗಳೂರು ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ ಹಾಗೂ ಮಂಗಳೂರಿನ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜಿ.ಡಿ. ಮೀನಾ ಉಪಸ್ಥಿತರಿದ್ದರು.