ಹೆದ್ದಾರಿ ಬದಿ ಶೇಖರಿಸಿದ ಕಸವನ್ನು ಆಯಾಯ ಗ್ರಾಪಂಗಳ ಘನತ್ಯಾಜ್ಯ ಘಟಕಕ್ಕೆ ಸ್ವಚ್ಛವಾಹಿನಿಯ ಮೂಲಕ ಸಾಗಿಸಲಾಯಿತು. 
ಉಡುಪಿ

ಕೊಯಿಲ-ಸುಬ್ರಹ್ಮಣ್ಯ ಸ್ವಚ್ಛತಾ ಅಭಿಯಾನ

ಇಂದಿರಾ ಎನ್ ಕೆ
ಕಡಬ: ದ.ಕ.ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ, ತಾಪಂ ಕಡಬ ಹಾಗೂ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸ್ವಚ್ಛ ಶನಿವಾರ ಕಾರ್ಯಕ್ರಮದ ಅಂಗವಾಗಿ ಗ್ರಾಪಂ ಹಾಗೂ ಕಡಬ ಪಪಂ, ತಾಪಂ ಆಶ್ರಯದಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ ನಡೆಯಿತು.
ಹೆದ್ದಾರಿ ಬದಿ ಗ್ರಾಪಂ ಕೊಯಿಲ, ರಾಮಕುಂಜ, ಆಲಂಕಾರು, ಪೆರಾಬೆ, ಕುಟ್ರುಪಾಡಿ, ಕಡಬ ಪಪಂ, ಕಡಬ ತಾಪಂ, ಮರ್ಧಾಳ, ಐತ್ತೂರು, ಬಿಳಿನೆಲೆ ಹಾಗೂ ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಯಿತು. ವಿಶೇಷ ಸಂಘ-ಸಂಸ್ಥೆ, ವಿವಿಧ ಇಲಾಖೆ, ಗ್ರಾಮಸ್ಥರ ಸಹಕಾರದೊಂದಿಗೆ ಹೆದ್ದಾರಿಯುದ್ದಕ್ಕೂ ಸುಮಾರು 45 ಕಿ.ಮೀ. ಸ್ವಚ್ಛತೆ ಏಕಕಾಲದಲ್ಲಿ ನಡೆಸಲಾಯಿತು.
ಹೆದ್ದಾರಿ ಹಾದುಹೋಗುವ 9 ಗ್ರಾಪಂ ಸ್ವಚ್ಛತೆಯ ಪ್ರತಿಜ್ಞೆ ಕೈಗೊಂಡು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶೇಖರಿಸಿದ ಕಸ ಆಯಾಯ ಗ್ರಾಪಂಗಳ ಘನತ್ಯಾಜ್ಯ ಘಟಕಕ್ಕೆ ಸ್ವಚ್ಛವಾಹಿನಿಯ ಮೂಲಕ ಸಾಗಿಸಲಾಯಿತು. ಇನ್ನೂ ಕೆಲವು ಗ್ರಾಪಂಗಳಲ್ಲಿ ಸ್ವಚ್ಛತೆ ಸಂದರ್ಭ ದೊರೆತ ಗೋಣಿಚೀಲದಲ್ಲಿ ಕಸ ಎಸೆದವರ ಕುರುಹು ಪತ್ತೆ ಹಚ್ಚಿ ದಂಡ ವಿಧಿಸಲಾಯಿತು.
ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೋಡಲ್ ಅಧಿಕಾರಿ ಜಯಲಕ್ಷ್ಮೀ ರಾಯಕೋಡ (ಕೆ.ಎ.ಎಸ್.), ಕಡಬ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸಲಹೆ-ಸೂಚನೆ ನೀಡಿದರು.
ಕಡಬ ಪಪಂ ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸದಸ್ಯರಾದ ಕುಸುಮಾ, ದಯಾನಂದ, ಶಾಲಿನಿ, ಮೋಹನ್‌ದಾಸ್, ಮುಖ್ಯಾಧಿಕಾರಿ ಲೀಲಾವತಿ ಹಾಗೂ ಸಿಬ್ಬಂದಿ, ಟೂರಿಸ್ಟ್ ವಾಹನ ಚಾಲಕ-ಮಾಲೀಕರ ಸಂಘ-ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಾಗರಿಕರು ಪಾಲ್ಗೊಂಡಿದ್ದರು. ಜಿಪಂ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡ್ಕಿದು, ನವೀನ್, ಪವನ್ ಸಹಕರಿಸಿದರು.