ಡೇವಿಡ್​ ಡಿಸೋಜಾ 
ಉಡುಪಿ

ಡೇವಿಡ್​ ಕೊಲೆ ಪ್ರಕರಣ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೈಂಟ್​ ಕ್ಷೇವಿಯರ್​ ಚರ್ಚ್​ ಕಾಂಪ್ಲೆಕ್ಸ್​ ಮುಂಭಾಗ ಉದ್ಯಮಿ ಡೇವಿಡ್​ ಡಿಸೋಜಾ ಅವರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಈವರೆಗೆ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಧಾನ ಸೂತ್ರಧಾರ ಹೇಮಂತ್​ ಪೂಜಾರಿ ಸಹಿತ ಎಲ್ಲರ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಜಾರಿಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉತ್ತರ ಪ್ರದೇಶ ರಾಜು ಅಲಿಯಾಸ್​ ರಾಜು ಹೇತ್ರಾಮ್​ ಜಾಟವ್​ (42), ಉತ್ತರಾಖಂಡದ ಅನ್ಮೋಲ್​ ರಸ್ತೋಗಿ (23) , ಬಿಹಾರದ ಜಿಯಾಹುಲ್​ ವಜೂಲ್​ ಶೇಖ್​ ಅಲಿಯಾಸ್​ ದೀಪಕ್​ (38) , ಸೂರಜ್​ ಕುಮಾರ್​ (31), ಅನೂಜ್​ ಕುಮಾರ್​ ಕಮಲೇಶ್ವರ ಪ್ರಸಾದ್​ ಪಟೇಲ್​ (36), ಕಾಪು ಎಮಾರ್ಳು ನಿವಾಸಿ ಚಿರಾಗ್​ ಪೂಜಾರಿ (24) , ಮಹಮ್ಮದ್​ ಇರ್ಷಾದ್​ (46), ಸದಾನಂದ ದೇವಾಡಿಗ (41), ಕಿಶೋರ್​ ರಾಮ ಪೂಜಾರಿ (47), ಯಡ್ತರೆಯ ಲೊಕೇಶ ತೇಜ ಕೊಠಾರಿ (42) ಬಂಧಿತರು. ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಎಚ್​.ಪಿ ಅಲಿಯಾಸ್​ ಹೇಮಂತ್​ ಪೂಜಾರಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ಕೋಕಾ ಕಾಯ್ದೆ ಪ್ರಯೋಗ

ಆರೋಪಿಗಳೆಲ್ಲರೂ ಭೂಗತ ಪಾತಕಿ ಹೇಮಂತ್​ ಪೂಜಾರಿ, ಅನೂಜ್​ ಕುಮಾರ್​ ಹಾಗೂ ಕಿಶೋರ್​ ಪೂಜಾರಿ ಅವರೊಂದಿಗೆ ಸೇರಿಕೊಂಡು ಸಂಘಟಿತ ಅಪರಾಧ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಎಸ್​ಪಿ ಅವರ ಶಿಫಾರಸಿನ ಮೇರೆಗೆ ಪಶ್ಚಿಮ ವಲಯ ಡಿಐಜಿ ಅವರು ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿದ್ದಾರೆ. ಪ್ರಕರಣದ ಸಂಪೂರ್ಣ ಕಡತ ಹಾಗೂ ಬಂಧಿತ ಆರೋಪಿಗಳನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಮುಂದಿನ ತನಿಖಾಧಿಕಾರಿಯಾಗಿ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್​ ಅಧೀಕ್ಷಕರನ್ನು ನಿಯೋಜಿಸಲಾಗಿದೆ.