ಕ್ಷೇಮವನದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರದ್ಧಾ ಅಮಿತ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಾಮಪ್ರಸಾದ್, ಉದ್ಯಮಿ ಜಿನರಾಜೇಂದ್ರ ಜೈನ್ ಮೊದಲಾದವರಿದ್ದರು.
ಬೆಳ್ತಂಗಡಿ: ಎಸ್‌ಡಿಎಂ ಐಟಿಐಯ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದಾರೆ. ಉದ್ಯಮಗಳಲ್ಲಿ ಉತ್ತಮ ಕೆಲಸಗಾರರಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಗುಣಮಟ್ಟವನ್ನು ಸದಾ ಉಳಿಸಿಕೊಳ್ಳಬೇಕು ಎಂದು ಬೆಂಗಳೂರು ಕ್ಷೇಮವನದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರದ್ಧಾ ಅಮಿತ್ ಹೇಳಿದರು.
ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯ 41ನೇ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಸುರಕ್ಷಾ ಕರಿಯರ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಶ್ರೀರಾಮಪ್ರಸಾದ್ ಮಾತನಾಡಿ, ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತಾಂತ್ರಿಕ ಕೌಶಲ ಅತ್ಯಂತ ಮುಖ್ಯ. ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ಸಂಬಳದ ಬಗ್ಗೆ ಹೆಚ್ಚು ಗಮನಹರಿಸದೆ, ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಉದ್ಯಮಿ ಜಿನರಾಜೇಂದ್ರ ಜೈನ್, ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಆರ್. ಮಾತನಾಡಿದರು. ರತ್ನಾಕರ ರಾವ್ ಎಚ್. ಸ್ವಾಗತಿಸಿದರು. ಪದ್ಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ಚಂದ್ರ ವಂದಿಸಿದರು.