ಉಡುಪಿ ಜಿಲ್ಲೆಯ ವಿವಿಧೆಡೆ 37 ದಿನಗಳ ಕಾಲ ನಡೆದ 'ಕಿಶೋರ ಯಕ್ಷಗಾನ ಸಂಭ್ರಮ&2025' ಅಭಿಯಾನ ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಂಪನ್ನಗೊಂಡಿತು. ರಾಘವ ಶೆಟ್ಟಿ ಬೇಳೂರು, ಎಂ.ಗಂಗಾಧರ್ ರಾವ್, ಮುರಳಿ ಕಡೆಕಾರ್, ಡಾ. ರತನ್ಕುಮಾರ್ ಶೆಟ್ಟಿ, ಡಾ. ರಾಜೇಶ್ ಬಾಯರಿ, ಸುಗುಣಾ, ಆಶಾ ಆಚಾರ್ಯ, ಕರುಣಾಕರ್ ಶೆಟ್ಟಿ, ನಾರಾಯಣ ಹೆಗಡೆ ಹಾಗೂ ವಿದ್ಯಾರ್ಥಿಗಳಿದ್ದರು.
* ವಿಮರ್ಶಕ ರಾಘವ ಶೆಟ್ಟಿ ಬೇಳೂರು ಅನಿಸಿಕೆ
* ಕಿಶೋರ ಯಕ್ಷಗಾನ ಮಹಾಭಿಯಾನ ಸಮಾಪನ
ಉಡುಪಿ: ಹದಿಹರೆಯದಲ್ಲಿ ಪಡೆದ ತರಬೇತಿ ಗಟ್ಟಿಯಾಗಿ, ಸ್ಥಿರವಾಗಿ ವಿದ್ಯಾರ್ಥಿಗಳ ಮನದಲ್ಲಿ ಉಳಿದುಕೊಳ್ಳುತ್ತದೆ. ಅದನ್ನು ವಿಜ್ಞಾನವೂ ದೃಢೀಕರಿಸಿದೆ. ಜ್ಞಾನವೃದ್ಧಿ ದೃಷ್ಟಿಯಿಂದ ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡುತ್ತಿರುವವುದ ಉತ್ತಮವಾದ ಉಪಕ್ರಮ. ಯಕ್ಷಗಾನ ಕಲೆಯ ಸಂವರ್ಧನೆಗೆ ಕಾರಣವಾಗುವ ಈ ಕಾರ್ಯವನ್ನು 18 ವರ್ಷದಿಂದ ಯಕ್ಷಶಿಕ್ಷಣ ಟ್ರಸ್ಟ್ ಮುನ್ನಡೆಸುತ್ತಿದೆ. ಅದನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಕಲಾರಂಗದ ಕಾರ್ಯಕರ್ತರು ಅಭಿನಂದನಾರ್ಹರು ಎಂದು ಯಕ್ಷಗಾನದ ಹಿರಿಯ ವಿಮರ್ಶಕ ರಾಘವ ಶೆಟ್ಟಿ ಬೇಳೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ (ಡಿ.31) ರಾತ್ರಿ ಮುಕ್ತಾಯಗೊಂಡ ಯಕ್ಷಶಿಕ್ಷಣ ಟ್ರೆಸ್ಟ್ ಉಡುಪಿಯ 'ಕಿಶೋರ ಯಕ್ಷಗಾನ ಮಹಾಭಿಯಾನ ಸಮಾಪನ' ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಮಾತನಾಡಿ, ನ.25ರಂದು ಬ್ರಹ್ಮಾವರದಲ್ಲಿ ಆರಂಭಗೊಂಡಿದ್ದ 'ಕಿಶೋರ ಯಕ್ಷಗಾನ ಸಂಭ್ರಮ-2025' ಕಾರ್ಯಕ್ರಮವು ಡಿ.31ರಂದು ಚಿತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಕ್ತಾಯಗೊಂಡಿದೆ. ಈ ವರ್ಷವೂ ಸಹ 3 ಸಾವಿರಕ್ಕೂ ಅಧಿಕ ಮಕ್ಕಳು ಯಕ್ಷಶಿಕ್ಷಣ ಪಡೆದಿದ್ದಾರೆ ಎಂದರು.
ಡಾ. ರತನ್ಕುಮಾರ್ ಶೆಟ್ಟಿ, ಡಾ. ರಾಜೇಶ್ ಬಾಯರಿ, ಸುಗುಣಾ, ಆಶಾ ಆಚಾರ್ಯ, ಕರುಣಾಕರ್ ಶೆಟ್ಟಿ, ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಶ್ರಾವ್ಯಾ, ಯಶಸ್ವಿನಿ, ಶ್ರೇಯಸ್, ಋತು ತಮ್ಮ ಯಕ್ಷ ಕಲಿಕೆಯ ಸ್ಮರಣೀಯ ಅನುಭವ ಹಂಚಿಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಲ್ಯಾಡಿ ಲೈವ್ನ ಪ್ರಶಾಂತ್ ಹಾಗೂ ಪ್ರಸಾಧನ ತಂಡದ ಮುಖ್ಯಸ್ಥ ಗಣೇಶ್ ಸಾಲಿಗ್ರಾಮ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಶೆಟ್ಟಿ ಸ್ವಾಗತಿಸಿದರು. ನಾಗರಾಜ್ ಶೆಟ್ಟಿ ನೈಕಂಬಿ ವಂದಿಸಿದರು. ರಾಘವೇಂದ್ರ ಶೆಟ್ಟಿ ನಿರೂಪಿಸಿದರು.
ಕಲೆ ಕಲಿತ 3,035 ವಿದ್ಯಾರ್ಥಿಗಳು
ಯಕ್ಷಶಿಕ್ಷಣ ಟ್ರಸ್ಟ್ನ ವತಿಯಿಂದ ನಿರಂತರ 37 ದಿನಗಳ ಕಾಲ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 'ಕಿಶೋರ ಯಕ್ಷಗಾನ ಸಂಭ್ರಮ-2025' ನಡೆಯಿತು. ಒಟ್ಟು 94 ಶಾಲೆಗಳ ವಿದ್ಯಾರ್ಥಿಗಳು 12 ಕಡೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. 41 ಗುರುಗಳು, ಐದು ಪ್ರಸಾಧನ ತಂಡಗಳು ಮಕ್ಕಳ ಯಕ್ಷಗಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದವು. ಪ್ರದರ್ಶನದಲ್ಲಿ 1,063 ವಿದ್ಯಾರ್ಥಿಗಳು, 1,972 ವಿದ್ಯಾರ್ಥಿನಿಯರು ಸೇರಿ ಹೈಸ್ಕೂಲ್ಗಳ ಒಟ್ಟು 3,035 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ 9 ಕ್ರೈಸ್ತ, 21 ಮುಸ್ಲಿಂ, ಬೇರೆ ಜಿಲ್ಲೆಯ 522, ಬೇರೆ ರಾಜ್ಯದ 21 ವಿದ್ಯಾರ್ಥಿಗಳು ಭಾಗವಹಿಸಿದ್ದು ಯಕ್ಷ ಅಭಿಯಾನದ ಸಾರ್ಥಕ್ಯದ ಸಂಕೇತವಾಗಿದೆ ಎಂದು ಮುರಳಿ ಕಡೆಕಾರ್ ಸಂತಸ ವ್ಯಕ್ತಪಡಿಸಿದರು.