ಶಾರದಾ ಸಮೂಹ ಸಂಸ್ಥೆಯಲ್ಲಿ ಸಚಿವ ಯು.ಟಿ.ಖಾದರ್ ಪದವಿ ಪ್ರದಾನ ಮಾಡಿದರು. ತುಳುನಾಡು ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್‌ನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್ ಇನ್ನಿತರರು ಉಪಸ್ಥಿತರಿದ್ದರು.  
ಉಡುಪಿ

ಜ್ಞಾನ, ಕೌಶಲ ಸಮಾಜದ ಒಳಿತಿಗೆ ಬಳಕೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ


ಭಾರತ ಬಲಿಷ್ಠ ಆಗಬೇಕಾದರೆ ಶಾಲಾ ಕೊಠಡಿಯೊಳಗೆ ಕಲಿಯುವ, ಶಾಲಾ ಮೈದಾನದಲ್ಲಿ ಆಡುವ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವೇ ಹೊರತು ಹವಾ ನಿಯಂತ್ರತಿತ ಕೋಣೆಯಲ್ಲಿ ಕುಳಿತ ಅಧಿಕಾರಿಗಳು, ಸಚಿವರು, ಶಾಸಕರಿಂದ ಸಾಧ್ಯವಿಲ್ಲ. ಯುವ ಪದವೀಧರರು ತಾವು ಗಳಿಸಿರುವ ಜ್ಞಾನ ಮತ್ತು ಕೌಶಲಗಳನ್ನು ಸಮಾಜದ ಒಳಿತಿಗಾಗಿ ಬಳಸುವುದರ ಜತೆಗೆ ತಾವು ಸೇವೆ ಸಲ್ಲಿಸುವ ಸಮುದಾಯಕ್ಕೂ ಕೊಡುಗೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಶಾರದಾ ಪದವಿ ಕಾಲೇಜು, ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು, ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜುಗಳನ್ನೊಳಗೊಂಡ ಶಾರದಾ ಸಮೂಹ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಣಿಪಾಲದ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್‌ನ ಪ್ರಾಂಶುಪಾಲ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ಸತ್ಯನಾರಾಯಣ ಭಟ್ ಮಾತನಾಡಿ, ಪದವೀಧರರು ತಮ್ಮ ವೃತ್ತಿಗೆ ನಿಷ್ಠರಾಗಿದ್ದುಕೊಂಡು ಮೌಲ್ಯ, ತತ್ವಗಳನ್ನು ಪ್ರಾಮಾಣಿಕತೆ ಹಾಗೂ ಸಮರ್ಪಣೆಯಿಂದ ಪಾಲಿಸಬೇಕು ಎಂದರು.
ತುಳುನಾಡು ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಇನಿಗ್ಮಾ ಕೇಂದ್ರದ ಅಧ್ಯಕ್ಷ ಡಾ.ನವೀನ್ ಕೆ.ವಿಶ್ವೇಶ್ವರಯ್ಯ, ಸಿಂಗಾಪುರದ ಟೆಥೆರ್ಫಿ ಟೆಕ್ನಾಲಜಿಕ್ಸ್ ಗ್ಲೋಬಲ್ ಎಚ್.ಆರ್.ಮ್ಯಾನೇಜರ್ ಲಕ್ಷ್ಮಣ ಶೆಣೈ ಮುಖ್ಯ ಅತಿಥಿಗಳಾಗಿದ್ದರು. ತುಳುನಾಡು ಎಜುಕೇಶನಲ್ ಟ್ರಸ್ಟ್ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್, ಕಾರ್ಯದರ್ಶಿ ಪ್ರದೀಪ ಕುಮಾರ್ ಕಲ್ಕೂರ, ಟ್ರಸ್ಟಿ ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
ಡಾ.ಸಂದೀಪ್ ಬೇಕಲ್ ಸ್ವಾಗತಿಸಿದರು. ಡಾ.ಮೀನಾ ಜೆ.ಪಣಿಕ್ಕರ್ ಅತಿಥಿಗಳನ್ನು ಪರಿಚಯಿಸಿದರು. ಡಾ.ನಂದೀಶ್ ಎನ್.ಎಸ್. ವಂದಿಸಿದರು. ಡಾ.ಅನುಪ್ರಿಯಾ ರಾವ್ ಹಾಗೂ ಗಣೇಶ್ ಕೃಷ್ಣ ಶರ್ಮ ನಿರೂಪಿಸಿದರು.

ಆಯುರ್ವೇದ ಮತ್ತು ನ್ಯಾಚುರೋಪತಿ ನಾವು ಆಮದು ಮಾಡಿಕೊಂಡಿದ್ದಲ್ಲ, ಭಾರತದ ವೈದ್ಯ ಪದ್ಧತಿಯಾಗಿದ್ದರೂ ನಮ್ಮಲ್ಲಿ ಸಂಶೋಧನಾ ಕೊರತೆಯಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ. ಇಂದು ಪದವಿ ಪಡೆದವರು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವುದರಿಂದ ಹಿಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಹೊಂದಿರುವವರಾಗಿದ್ದು ವಿಶೇಷ ಜವಾಬ್ದಾರಿ ಇದೆ. ಪದವಿ ಕೇವಲ ಉದ್ಯೋಗಕ್ಕೆ ಸೀಮಿತವಲ್ಲ, ಹೆಚ್ಚಿನ ಜ್ಞಾನ ಹೊಂದಲು ಪ್ರಯತ್ನಿಸಬೇಕು.

— ಡಾ.ಎಂ.ಬಿ.ಪುರಾಣಿಕ್, ಅಧ್ಯಕ್ಷ ತುಳುನಾಡು ಎಜುಕೇಶನಲ್ ಟ್ರಸ್ಟ್