ಎಂಐಆರ್​ ಸ್ಕ್ಯಾನಿಂಗ್​ನಲ್ಲಿ ಗೋಚರಿಸಿದ ಮಗುವಿನ ತಲೆಯಲ್ಲಿದ್ದ ದೊಡ್ಡ ಗಡ್ಡೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದ ಉಡುಪಿ ಮಣಿಪಾಲದ ಕೆಎಂಸಿ ನರಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ನಾಯಕ್​. 
ಉಡುಪಿ

ಮಿದುಳಿನಲ್ಲಿದ್ದ ಗಡ್ಡೆ ತೆರವು, ಶಿಕ್ಷಣಕ್ಕೆ ಸಜ್ಜಾದ ಬಾಲಕ

ಮಣಿಪಾಲದ ಕೆಎಂಸಿ ವೈದ್ಯರ ಯಶಸ್ವಿ ಚಿಕಿತ್ಸೆ

3 ವರ್ಷದ ಹಿಂದೆ 15 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ

ಉಡುಪಿ: ಮೂರು ವರ್ಷದ ಹಿಂದೆ 15 ದಿನದ ಗಂಡು ಮಗುವಿನ ದೊಡ್ಡದಾದ ತಲೆಬುರುಡೆಯೊಳಗೆ ಇದ್ದ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಮಣಿಪಾಲದ ಕೆಎಂಸಿ ವೈದ್ಯರು ಯಶಸ್ವಿಯಾಗಿದ್ದರು. ಇದೀಗ ಆ ಬಾಲಕ ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯಕರ ನರಮಂಡಲದ ಬೆಳವಣಿಗೆ ಮೂಲಕ ಶಾಲಾಪೂರ್ವ (ಪ್ರಿಸ್ಕೂಲ್​) ಶಿಕ್ಷಣಕ್ಕೆ ಸಿದ್ಧವಾಗಿದ್ದಾನೆ.

ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಚಿಕಿತ್ಸೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರಂಭಿಕ ಹಂತದ ಚಿಕಿತ್ಸೆ, ವಿಶೇಷ ಶಸ್ತ್ರ ಚಿಕಿತ್ಸಾ ಪರಿಣತಿ ಮತ್ತು ವಿವಿಧ ವಿಭಾಗಗಳ ಸಮನ್ವಯದೊಂದಿಗೆ ನೀಡಿದ್ದ ಆರೈಕೆಯ ಫಲವಾಗಿ ಬಾಲಕ ಸಂಪೂರ್ಣ ಗುಣಮುಖನಾಗಿದ್ದಾನೆ.

ದೊಡ್ಡ ತಲೆ ಹೊಂದಿದ್ದ ಮಗು

ಜನಿಸಿದ ಮಗುವಿನ ತಲೆಯ ಗಾತ್ರವು ದೊಡ್ಡದಾಗಿದ್ದರಿಂದ ಪಾಲಕರು ಕೆಎಂಸಿಗೆ ಕರೆತಂದಿದ್ದರು. ಇದು ನರರೋಗದ ಸಮಸ್ಯೆಯಿರಬಹುದೆಂದು ವೈದ್ಯರು ಊಹಿಸಿದ್ದರು. ಬಳಿಕ ಮಿದುಳಿನ ಎಂಆರ್​ಐ ಸ್ಕ್ಯಾನ್​ ಮಾಡಿದಾಗ ತಲೆಬುರುಡೆಯೊಳಗೆ ದೊಡ್ಡ ದ್ರವ್ಯರಾಶಿ ಹೊಂದಿದ್ದ ಬೃಹತ್​ ಗಡ್ಡೆ ಕಂಡುಬಂತು. ಅದು 'ಹೈಗ್ರೇಡ್​' (ತೀವ್ರ ಸ್ವರೂಪ) ಗಡ್ಡೆಯಾಗಿತ್ತು. ಮಗುವಿಗೆ ಕೇವಲ 15 ದಿನವಾಗಿದ್ದು, ತಲೆಯಲ್ಲಿ ಅಷ್ಟೊಂದು ದೊಡ್ಡ ಗಡ್ಡೆ ಬೆಳೆದಿರುವುದು ವೈದ್ಯರಿಗೂ ಸವಾಲಾಗಿ ಪರಿಣಮಿಸಿತ್ತು.

ಪಾಲಕರಿಗೆ ವಿಷಯ ತಿಳಿಸಿದ ಡಾ. ರಾಘವೇಂದ್ರ ನಾಯಕ್​ ನೇತೃತ್ವದ ನರಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯರು, ಮಿದುಳಿಗೆ ಬೃಹತ್​ ಗಡ್ಡೆ ಬೆಳೆದಿದ್ದು ಅದನ್ನು ತೆಗೆಯದಿದ್ದರೆ ಮಗುವಿನ ಜೀವಕ್ಕೆ ಅಪಾಯವಾಗಲಿದೆ ಎಂದು ತಿಳಿಸಿ, ಅವರನ್ನು ಸಮಾಧಾನಗೊಳಿಸಿದ್ದ ವೈದ್ಯಕೀಯ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತ್ತು.

ಶಸ್ತ್ರಚಿಕಿತ್ಸೆಯ ಬಳಿಕ ಮಗುವನ್ನು ಸೂಕ್ತ ಆರೈಕೆಗಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆರಂಭದಲ್ಲಿ ಸವಾಲುಗಳಿದ್ದರೂ ಮಗು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿತು. ಬಲುಬೇಗ ಚೇತರಿಕೆ ಕಂಡುಬಂದಿದ್ದರಿಂದ ವಾರದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಜನರ ಆರೋಗ್ಯ ರಕ್ಷಣೆಗೆ ಸಂಸ್ಥೆ ಬದ್ಧ

ಡಾ. ಶೀಲಾ ಎಸ್​. ಮಥಾಯಿ ನೇತೃತ್ವದ ನವಜಾತ ಶಿಶು ಆರೈಕೆಯ ತಂಡ, ಡಾ. ವಾಸುದೇವ್​ ಭಟ್​ ನೇತೃತ್ವದ ಮಕ್ಕಳ ಅಂಕೊಲಾಜಿ ಸೇವೆಗಳು ಮತ್ತು ಸಮಗ್ರ ಪುನಶ್ಚೇತನ ಸೌಲಭ್ಯಗಳೊಂದಿಗೆ ಉತ್ತಮ ಆರೈಕೆ ಒದಗಿಸಲಾಗಿತ್ತು. ಈ ಶಸ್ತ್ರ ಚಿಕಿತ್ಸೆಯು ನಮ್ಮ ಸಂಸ್ಥೆ ಏನನ್ನು ಸಾಧಿಸಲು ಸ್ಥಾಪಿತವಾಗಿದೆ ಎನ್ನುವುದಕ್ಕೆ ಪ್ರತಿಬಿಂಬವಾಗಿದೆ. ಕಸ್ತೂರ್ಬಾ ಆಸ್ಪತ್ರೆಯು ಇಂತಹ ಸವಾಲುಗಳನ್ನು ಎದುರಿಸಲು ಅವಶ್ಯಕ ಮೂಲಸೌಕರ್ಯ ಹೊಂದಿದೆ. ನಮ್ಮ ವೈದ್ಯರು ಮತ್ತು ಆರೈಕೆ ಸಿಬ್ಬಂದಿ ಬಗ್ಗೆ ನಮಗೆ ತುಂಬ ಹೆಮ್ಮೆಯಿದೆ. ಆ ಬಾಲಕ ಹಾಗೂ ಪಾಲಕರ ಸಂತಸದಲ್ಲಿ ನಾವೂ ಭಾಗಿಗಳಾಗಿದ್ದೇವೆ. ಜನರ ಆರೋಗ್ಯ ರಕ್ಷಣೆಗೆ ಸಂಸ್ಥೆ ಬದ್ಧವಾಗಿದೆ ಎಂದು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್​ ಕಂಟಿಪುಡಿ ತಿಳಿಸಿದ್ದಾರೆ.

ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡುವುದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಕಾರ್ಯ. ತಲೆಯಲ್ಲಿ ಗಡ್ಡೆ ತುಂಬ ದೊಡ್ಡದಾಗಿತ್ತು. ಶಿಶುವಿನಲ್ಲಿ ರಕ್ತದ ಪ್ರಮಾಣ ಕಡಿಮೆ ಇರುತ್ತದೆ. ಸ್ವಲ್ಪ ಪ್ರಮಾಣದಲ್ಲಿ ರಕ್ತ ನಷ್ಟವಾದರೂ ಗಂಭೀರ ಪರಿಣಾಮ ಬೀರುತ್ತದೆ. ತುಂಬ ಸವಾಲಿದ್ದರೂ ಸಹ ನಾವು ಶಸ್ತ್ರ್ರಚಿಕಿತ್ಸೆ ನಡೆಸಲು ನಿರ್ಧರಿಸಿ, ಗಡ್ಡೆಯನ್ನು ಸಂಪೂರ್ಣವಾಗಿ ತೆಗೆಯುವಲ್ಲಿ ಯಶಸ್ವಿಯಾಗಿದ್ದೆವು.
ಡಾ. ರಾಘವೇಂದ್ರ ನಾಯಕ್​. ಕೆಎಂಸಿ ನರಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ.