ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಬೈಕ್​ ರ್ಯಾಲಿಗೆ ಚಾಲನೆ ನೀಡಿದರು 
ಉಡುಪಿ

ಕ್ಯಾನ್ಸರ್​ ಜಾಗೃತಿಗಾಗಿ ಬೈಕ್​ ಜಾಥಾ

ಉಡುಪಿ: ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ ಹಾಗೂ ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಹೇಳಿದರು.

ವಿಶ್ವ ಕ್ಯಾನ್ಸರ್​ ದಿನದ ಅಂಗವಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಆಟೋ ಕ್ಲಬ್​, ರಾಯಲ್​ ಎನ್​ಫೀಲ್ಡ್​ ರೈಡರ್ಸ್​ ಹಾಗೂ ಆಭರಣ ಮೋಟಾರ್ಸ್​ ಸಹಯೋಗದೊಂದಿಗೆ ಕ್ಯಾನ್ಸರ್​ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಕ್ಯಾನ್ಸರ್​ ವಿರುದ್ಧ ಹೋರಾಟದಲ್ಲಿ ಸಾರ್ವಜನಿಕರ ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೈಕ್​ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಕೆಎಂಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್​ ಕಂಟಿಪುಡಿ ಮಾತನಾಡಿ, ಕ್ಯಾನ್ಸರ್​ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕವಾಗುತ್ತಿದ್ದು, ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನಶೈಲಿ ಬದಲಾವಣೆಯ ಅಗತ್ಯವಾಗಿದೆ. ಇಂತಹ ಜಾಥಾಗಳ ಮೂಲಕ ಆಸ್ಪತ್ರೆಯ ಮಿತಿಯನ್ನು ಮೀರಿ ಸಮಾಜದೊಳಗೆ ಆರೋಗ್ಯ ಸಂದೇಶವನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಮಣಿಪಾಲ ಹೆಲ್ತ್​ ಎಂಟರ್​ಪೆಸಸ್​ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್​ ಜೋಸ್​ ಗೌರವ ಅತಿಥಿಯಾಗಿದ್ದರು. ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೈದ್ಯಕಿಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್​ ಪೈ ವಿಶ್ವ ಕ್ಯಾನ್ಸರ್​ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು.

ಬೈಕ್​ ರಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್​ ಸವಾರರು ಉತ್ಸಾಹದಿಂದ ಭಾಗವಹಿಸಿದ್ದು, ಜಾಥವು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಹೊರಟು ಉಡುಪಿ ಮುಖ್ಯ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ಸಾಗಿ ಅಲ್ಲಿಂದ ಮರುಕಳಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು.