ಯಕ್ಷಗಾನ ಪೋಷಾಕಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ. 
ಉಡುಪಿ

ಉಡುಪಿಯಲ್ಲಿ ಡಿ.2ರಿಂದ 'ಕಿಶೋರ ಯಕ್ಷಗಾನ' ಸಂಭ್ರಮ ಆರಂಭ

ಡಿ.18ರ ವರೆಗೆ ರಾಜಾಂಗಣದಲ್ಲಿ ಮಕ್ಕಳ ಕಲರವ

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಕಲಾರಂಗ ರಂಗ ಉಡುಪಿ (ರಿ.) ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್​ (ರಿ.) ಉಡುಪಿ ಸಹಭಾಗಿತ್ವದಲ್ಲಿ ಡಿ.18ರ ವರೆಗೆ ನಡೆಯಲಿರುವ ಉಡುಪಿಯ 25 ಪ್ರೌಢಶಾಲಾ ವಿದ್ಯಾರ್ಥಿಗಳ "ಕಿಶೋರ ಯಕ್ಷಗಾನ ಸಂಭ್ರಮ-2025' ಡಿ.2ರಿಂದ ಆರಂಭಗೊಳ್ಳಲಿದೆ.
 ಮಧ್ಯಾಹ್ನ 3 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಶಾಲಾ ಮಕ್ಕಳ ಯಕ್ಷಗಾನ ಸಂಭ್ರಮ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಲಿದ್ದು, ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಶುಭಾಶಂಸನೆ ನೀಡಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ, ಮಾಜಿ ಶಾಸಕ ಕೆ.ರಘುಪತಿ ಭಟ್​, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪಣಂಬೂರು ವಾಸುದೇವ ಐತಾಳ್​ (ಯುಎಸ್​ಎ), ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಪಾಲ್ಗೊಳ್ಳಲಿದ್ದಾರೆ. 
ಸಭಾ ಕಾರ್ಯಕ್ರಮದ ಬಳಿಕ ಮೊದಲ ದಿನದ ಪ್ರದರ್ಶನವಾಗಿ ಯಕ್ಷಗುರು ಚರಿತ್​ ಅಭಿಮನ್ಯು ಹೇರೂರು ನಿರ್ದೇಶನದಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್​ ಸ್ಕೂಲ್​ನ ವಿದ್ಯಾರ್ಥಿಗಳಿಂದ ವೀರ ಅಭಿಮನ್ಯು ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.