ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು.
* ಉಡುಪಿ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಭರವಸೆ
* ಎಲ್ಲ ಗ್ರಾಪಂಗಳಲ್ಲಿ ಹೆಚ್ಚು ಸದಸ್ಯರ ಗೆಲ್ಲಿಸುವ ಆಸೆ
ಉಡುಪಿ: ದೇಶಾದ್ಯಂತ ಕಾಂಗ್ರೆಸ್ಅನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೊಸ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದ್ದು, ಉಡುಪಿ ಜಿಲ್ಲಾಧ್ಯಕ್ಷರಾಗಿ ಸಹಕಾರಿ ಧುರೀಣ, ಸಾರಿಗೆ ಉದ್ಯಮಿ ಹಾಗೂ ಜಿಲ್ಲಾ ಕಾಂಗ್ರೆಸ್ನ ಪ್ರಸ್ತುತ ಕಾರ್ಯಾಧ್ಯಕ್ಷರೂ ಆದ ಕಿಶನ್ ಹೆಗ್ಡೆ ಕೊಳ್ಕೆಬೈಲು ನೇಮಕಗೊಂಡಿದ್ದಾರೆ. ನೂತನ ಸಾರಥ್ಯದ ಜವಾಬ್ದಾರಿ ಹೆಗಲೇರಿಸಿಕೊಂಡ ಅವರು ವಿಜಯವಾಣಿಯೊಂದಿಗೆ ಗುರುವಾರ (ಸೆ.10) ತಮ್ಮ ಅನಿಸಿಕೆ, ಮುಂದಿನ ಕಾರ್ಯಯೋಜನೆ ಹಾಗೂ ಪಕ್ಷ ಸಂಘಟನೆಯ ಕುರಿತು ಮನದಾಳ ಹಂಚಿಕೊಂಡಿದ್ದಾರೆ.
* ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದೀರಿ. ಆಯ್ಕೆ ಪ್ರಕ್ರಿಯೆ ಹೇಗಿತ್ತು?
ಯುವನಾಯಕತ್ವಕ್ಕೆ ಮನ್ನಣೆ ನೀಡಬೇಕೆಂಬ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ ಅವರ ಆಶಯದಂತೆ ಈ ಬಾರಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ದೇಶವ್ಯಾಪಿ 'ಸಂಘಟನಾ ಸೃಜನ್ ಅಭಿಯಾನ (ಎಸ್ಎಸ್ಎ)' ನಡೆಸಲಾಗಿತ್ತು. ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್ ಪಟೇಲ ಅವರು ಜು.25ರಂದು ಉಡುಪಿಗೆ ಆಗಮಿಸಿ ವಾರಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಿ, ಆಕಾಂಗಳಿಂದ ಅರ್ಜಿ ಸ್ವೀಕರಿಸಿ, ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಎಲ್ಲರ ಕಾರ್ಯಚಟುವಟಿಕೆ ಚರ್ಚಿಸಿ, ಅಳೆದು, ತೂಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ಅದರಲ್ಲಿ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ.
ಪಕ್ಷ ಸಂಘಟನೆಯೇ ಆದ್ಯತೆ, ಅದುವೇ ಬದ್ಧತೆ. ಜಿಲ್ಲೆಯಲ್ಲಿರುವ ಕಾಂಗ್ರೆಸ್ನ ಎಲ್ಲ 1,112 ಬೂತ್ಗಳಿಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ಮಾಡಲಿದ್ದೇನೆ. ಮುಂದಿನ ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಪಂ. ಜಿಪಂ ಚುನಾವಣೆಯಲ್ಲೂ ಗೆಲ್ಲಲು ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುವುದು.
ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದ್ದು ಎಲ್ಲ 5 ಕ್ಷೇತ್ರದಲ್ಲೂ ಅವರ ಶಾಸಕರೇ ಇದ್ದಾರೆ. ಅವರನ್ನು ಮಣಿಸುವುದು ಸುಲಭವೇ?
ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿರುವುದು ಸತ್ಯ. ಖಂಡಿತ ನಮಗೆ ಸವಾಲಿದೆ. 5 ಕ್ಷೇತ್ರದಲ್ಲಿ ಅವರನ್ನು ಸೋಲಿಸುವುದು ಸುಲಭವಲ್ಲ ಎನ್ನುವುದೂ ತಿಳಿದಿದೆ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಶವಾಗಿಲ್ಲ, ಸೋತಿದೆ ಅಷ್ಟೇ. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದು ಬರುತ್ತೇವೆ. 2028ರ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಉಡುಪಿ ಜಿಲ್ಲೆಯ ಶಾಸಕರೂ ಖಂಡಿತ ಇರುತ್ತಾರೆ. ಅಂತಹ ಕಾರ್ಯಯೋಜನೆ ನಡೆಯಲಿದೆ.
ಪಕ್ಷದಲ್ಲಿ ಹೊಸ ಕಾರ್ಯಕರ್ತರ ಪಡೆ ರಚಿಸಲು ಏನುಕ್ರಮ?
- ಯಾವುದೇ ಪಕ್ಷಕ್ಕೂ ಕಾರ್ಯಕರ್ತರೇ ಜೀವಾಳ. ಮೌನವಾಗಿ ಯುವ ಸಮುದಾಯವನ್ನು ಪರಿವರ್ತಿಸುವ ಅಗತ್ಯತೆ ಈಗ ಹೆಚ್ಚಿದೆ. ನಾವು ಯುವ ಸಮುದಾಯಕ್ಕೆ ಸಿಮೆಂಟ್ ಭಾಗ್ಯ, ಗೋಹತ್ಯಾ ಭಾಗ್ಯ, ಖಡ್ಗ ಭಾಗ್ಯ ಕೊಟ್ಟು ಅವರ ದಾರಿ ತಪ್ಪಿಸುವ ಕೆಲಸ ನಾವು ಮಾಡುವುದಿಲ್ಲ. ದೇಶದ ಪ್ರಸ್ತುತ ವಿದ್ಯಮಾನಗಳ ಕುರಿತು ಯುವ ಸಮುದಾಯಕ್ಕೆ ಅರಿವು ಮೂಡಿಸಿ ಕಾಂಗ್ರೆಸ್ನ ತ್ಯಾಗ, ಕೊಡುಗೆಗಳ ಬಗ್ಗೆ ವಿವರಿಸುತ್ತೇವೆ. ಕಾಲ ಎಲ್ಲವುದಕ್ಕೂ ಉತ್ತರ ಕೊಡುತ್ತದೆ. ಮಲಗಿದವರು ಏಳಲೇಬೇಕು. ಅವರನ್ನು ಏಳಿಸುವ ಕೆಲಸ ನಮ್ಮದು.
ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಪಕ್ಷದಲ್ಲೇ ವಿರೋಧ ನಿಜವೇ?
ಇರಬಹುದು. ಆದರೆ, ವಿರೋಧ ಇದ್ದರೂ, ಇಲ್ಲದಿದ್ದರೂ ಅದರ ಬಗ್ಗೆ ಚರ್ಚೆ ಈಗ ಅನಗತ್ಯ. ಪಕ್ಷದ ಹೊಸ ನಿಯಮಾವಳಿಯಂತೆ ಅಭಿಯಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆದು ಪಕ್ಷದ ವರಿಷ್ಠರು ನನಗೆ ಅವಕಾಶ ನೀಡಿದ್ದಾರೆ. ಹಿಂದೆ ನಡೆದಿದ್ದೆಲ್ಲ ಕಹಿ ಘಟನೆ. ತಾಳ್ಮೆಯಿಂದ ಕಾದಿದ್ದೇನೆ. ಯಾವುದೇ ಷರತ್ತಿಲ್ಲದೆ ಪಕ್ಷ ನೀಡಿರುವ ಜವಾಬ್ದಾರಿಗೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ಎಂದರೆ ದೇವಾಲಯ. ಚೆನ್ನಾಗಿ ಪೂಜಿಸುತ್ತೇನೆ. ಎಲ್ಲ ಹಿರಿ&ಕಿರಿಯರನ್ನು ಒಗ್ಗೂಡಿಸಿ ಜಿಲ್ಲೆಯಲ್ಲಿ 'ಕೈ ಬಲ' ಹೆಚ್ಚಿಸುತ್ತೇನೆ.