ಅಪ್ರಾಪ್ತ ವಿದ್ಯಾರ್ಥಿಯ ಅಪಹರಣ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು.
* ಓರ್ವ ಅಪ್ರಾಪ್ತ ಬಾಲಕ ವಶಕ್ಕೆ
ಉಡುಪಿ: ಅಪ್ರಾಪ್ತ ವಿದ್ಯಾರ್ಥಿಯನ್ನು ಅಪಹರಿಸಿ ಕೇರಳ ರಾಜ್ಯಕ್ಕೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಸೇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಮೂರನೇ ಆರೋಪಿ, ಕಾನೂನು ಸಂರ್ಷಕ್ಕೆ ಒಳಗಾಗಿರುವ ಓರ್ವ ಬಾಲಕನನ್ನು ನ್ಯಾಯಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಬ್ರಹ್ಮಾವರ ತಾಲೂಕಿನ ಸಾಲಿಕೇರಿ ವಾರಂಬಳ್ಳಿ ಗ್ರಾಮದ ಕುಮಾರ ಚಾವಡಿ ದೇವಸ್ಥಾನ ಸಮೀಪದ ನಿವಾಸಿ ವಿಖ್ಯಾತ್ ಆರ್. ಆಚಾರ್ಯ (19), ಮಟಪಾಡಿ ಗ್ರಾಮದ ಜುಮ್ಮಾ ಮಸೀದಿ ಸಮೀಪದ ನಿವಾಸಿ ಸುಚಿತ್ ಪಿ. ನಾಯಕ್ (20) ಬಂಧಿತ ಯುವಕರು.
ಘಟನೆಯ ವಿವರ
ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ತಾರೇಶ್ ಎನ್. (38) ಎಂಬವರ ಮಗ, ಅಪ್ರಾಪ್ತ ವಯಸ್ಸಿನ ತಿಲಕ್ ಎಂಬಾತ ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತನನ್ನು ಜೂ.1ರಂದು ಬೆಳಗ್ಗೆ 8:30ಕ್ಕೆ ಬ್ರಹ್ಮಾವರದ ಬಸ್ ನಿಲ್ದಾಣದಿಂದ ವಿಖ್ಯಾತ್ ಮತ್ತು ಸುಚಿತ್ ಎಂಬವರು ಅಪಹರಿಸಿದ್ದರು. ಬಳಿಕ ಕೇರಳ ರಾಜ್ಯದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿರುವ ವುಡ್ ಕಂಪನಿಗೆ ಬೆದರಿಸಿ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು.
ಅಪ್ರಾಪ್ತ ಬಾಲಕ ತಾನು ಮನೆಗೆ ಹೋಗುತ್ತೇನೆಂದು ಎಷ್ಟೇ ಗೋಗರೆದರೂ ಬಿಟ್ಟಿರಲಿಲ್ಲ. ಜೂ.9ರಂದು ಅವರು ವಾಸವಿದ್ದ ಕೋಣೆಯಲ್ಲಿ ಮಧ್ಯಾಹ್ನ 1:30ರ ವೇಳೆಗೆ ಆರೋಪಿ ಸುಚಿತ್ ಎಂಬಾತ ವಯರ್ನಿಂದ ಹಲ್ಲೆ ಮಾಡಿದ್ದನು. ವಿಖ್ಯಾತನು ಕೈಯಲ್ಲಿ ಚೂರಿ ಹಿಡಿದುಕೊಂಡು, ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಅವರಿಬ್ಬರ ಈ ಕೃತ್ಯವನ್ನು ಮುಸ್ತಾಕ್ ಎಂಬಾತ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದನು.
ತನ್ನ ಮಗ ತಿಲಕ್ ನಾಪತ್ತೆ ಅಥವಾ ಅಪಹರಣಕ್ಕೊಳಗಾಗಿರುವ ಕುರಿತು ತಂದೆ ತಾರೇಶ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.