ಡಾ.ಕಯ್ಯರ ಕಿಞಣ್ಣ ರೈ ಹೆಸರಲ್ಲಿ ನಿರ್ಮಿಸಿರುವ ಕನ್ನಡ ಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರಿಗೆ ತಿರುವನಂತಪುರದಲ್ಲಿ ಬುಧವಾರ ಆಹ್ವಾನ ನೀಡಲಾಯಿತು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರಕಾಶ ಮತ್ತಿಹಳ್ಳಿ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮೊದಲಾದವರಿದ್ದರು. 
ಉಡುಪಿ

ಡಾ.ಕಯ್ಯರ ಕನ್ನಡ ಭವನ ಉದ್ಘಾಟನೆಗೆ ಕೇರಳ ಸಿಎಂಗೆ ಆಹ್ವಾನ

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಸಿ 2 ಕೋಟಿ ರೂ. ವೆಚ್ಚದಲ್ಲಿ ಬದಿಯಡ್ಕದಲ್ಲಿ ನಿರ್ಮಿಸಿರುವ ಡಾ.ಕಯ್ಯರ ಕಿಞಣ್ಣ ರೈ ಕನ್ನಡ ಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರಿಗೆ ತಿರುವನಂತಪುರದಲ್ಲಿ ಬುಧವಾರ ಔಪಚಾರಿಕ ಆಹ್ವಾನ ನೀಡಲಾಯಿತು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಯಿತು.
ಈ ವೇಳೆ ಕಾಸರಗೋಡು ಕನ್ನಡಿಗರ ವಿವಿಧ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸಿಎಂಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಜತೆ ಚರ್ಚಿಸಿ ಇಬ್ಬರೂ ಸಿಎಂಗಳಿಗೆ ಅನುಕೂಲವಾಗುವಂತೆ ದಿನಾಂಕ ನಿಗದಿಪಡಿಸಲಾಗುವುದು. ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ವಿ.ಡಿ.ಸತೀಶನ್ ಭರವಸೆ ನೀಡಿದರು.
ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಡಾ.ಪ್ರಸನ್ನ ರೈ, ಮಾಹಿನ್ ಕೇಳೋಟ್, ಡಾ.ಮಲ್ಲಿಕಾರ್ಜುನ ನಾಸಿ, ಶರೀನ್ ಮಹಮ್ಮದ್ ಇತರರು ಇದ್ದರು.

ಬೇಡಿಕೆಗಳ ಮನವಿ ಸಲ್ಲಿಕೆ

ಮಲಯಾಳ ಭಾಷಾ ಮಸೂದೆ-2025ರಿಂದ ಕಾಸರಗೋಡನ್ನು ಹೊರತುಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು. ಕೇರಳದ ನೇಮಕಾತಿಗಳಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲಾತಿ ಸೌಲಭ್ಯ ಒದಗಿಸಬೇಕು. ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳಲ್ಲಿ ಕನ್ನಡ ಬಳಸಬೇಕು. ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರ ನೇಮಕ ಮಾಡಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗೆ ನೀಡಲಾಯಿತು.