ಕೆಸರುಮಯವಾಗಿರುವ ಕೊಡ್ಯಡ್ಕ ಕೇಮಾರು ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು. 
ಉಡುಪಿ

ಕೇಮಾರು ರಸ್ತೆ ಕೆಸರುಮಯ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ಯಡ್ಕ-ಕೇಮಾರು ರಸ್ತೆ ನಾಲ್ಕು ತಿಂಗಳಿಂದ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ತೆರಳುವ ಬಸ್‌ಗಳು, ರಿಕ್ಷಾಗಳು, ದ್ವಿಚಕ್ರ ವಾಹನಗಳು ಹಾಗೂ ದಿನಗೂಲಿ ಕೆಲಸಕ್ಕೆ ತೆರಳುವ ನಾಗರಿಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಕೇಮಾರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಿರಿದಾದ ಪಂಚಾಯಿತಿ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದೆ. ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಲೂಕಿನ ಕಲ್ಲಮುಂಡ್ಕೂರು, ನಿಡ್ಡೋಡಿ, ಪುತ್ತಿಗೆ ಹಾಗೂ ಪಾಲಡ್ಕ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟದ ಬೃಹತ್ ವಾಹನಗಳ ಸಂಚಾರ ಈಗ ಕೇಮಾರು ಭಾಗಕ್ಕೂ ವ್ಯಾಪಿಸಿದೆ. ಮಣ್ಣು ಸಾಗಾಟದ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಕೆಸರು ಹೆಚ್ಚಾಗಿದ್ದು, ವಾಹನ ಚಲಾಯಿಸುವುದೇ ಸವಾಲಾಗಿದೆ.
ಮಣ್ಣು ಸಾಗಾಟದ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಪಾಲುಗಾರಿಕೆ ಇದೆ ಎಂಬ ಆರೋಪಗಳು ಕೇಳಿಬರುತ್ತಿದ್ದರೂ, ಇದರಿಂದ ತೊಂದರೆ ಅನುಭವಿಸುತ್ತಿರುವ ನಾಗರಿಕರ ಸಮಸ್ಯೆಗೆ ಪರಿಹಾರ ಒದಗಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಕಾನೂನು ಕ್ರಮದ ಎಚ್ಚರಿಕೆ

ರಸ್ತೆಯಲ್ಲಿನ ಕೆಸರು ಹಾಗೂ ವಾಹನ ಸವಾರರಿಗೆ ಉಂಟಾಗುತ್ತಿರುವ ತೊಂದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾಗದ ಮಾಲೀಕರು ಹಾಗೂ ಗುತ್ತಿಗೆದಾರರು ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.