ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ- ಪಿಲಿಚಂಡಿ ದೈವಸ್ಥಾನದಲ್ಲಿ ಪಿಲಿಕೋಲ ನಡೆಯಿತು. 
ಉಡುಪಿ

ಕಾಪು ದ್ವೈ ವಾರ್ಷಿಕ ಪಿಲಿಕೋಲ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಮೇ 12ರಿಂದ ವಿವಿಧ ಪರಿವಾರ ದೈವಗಳ ನೇಮ
  • ಅವಿಭಜಿತ ದ.ಕ., ಉಡುಪಿ ಜಿಲ್ಲೆ, ಮುಂಬೈ ವಿವಿಧೆಡೆಗಳಿಂದ ಅಸಂಖ್ಯಾತ ಸಂಖ್ಯೆಯ ಭಕ್ತರು, ಜಾನಪದಾಸಕ್ತರು ಭಾಗಿ
ಪಡುಬಿದ್ರಿ: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾದ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ- ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿಕೋಲ ವಿಶೇಷ ಆಕರ್ಷಣೆಯೊಂದಿಗೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶನಿವಾರ ಸಂಪನ್ನಗೊಂಡಿತು.
ಪಿಲಿ ಕೋಲಕ್ಕೆ ಪೂರ್ವಭಾವಿಯಾಗಿ ಮೇ 12ರಿಂದ ವಿವಿಧ ಪರಿವಾರ ದೈವಗಳ ನೇಮ ನಡೆಯಿತು. ಬೆಳಗ್ಗೆ ಪಿಲಿ ಭೂತದ ನರ್ತಕನಿಗೆ ಎಣ್ಣೆ ವೀಳ್ಯ ನೀಡಿ, ಬಳಿಕ ಪಿಲಿಚಂಡಿ ಮನೆಯ ದೈವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಕೋಲದ ದಿರಿಸುಗಳನ್ನು ನೀಡಿ ಸ್ನಾನಕ್ಕೆ ಕರೆದೊಯ್ಯಲಾಯಿತು. ಸ್ನಾನ ಮುಗಿಸಿ ಬಂದ ಬಳಿಕ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಸಂಪ್ರದಾಯದಂತೆ ದೈವಕ್ಕೆ ಗಂಡು ಕರುವನ್ನು ಬಂಟ ರೂಪದಲ್ಲಿ ಸಲ್ಲಿಸಿ, ಬಣ್ಣಗಾರಿಕೆಗಾಗಿ ಪಂಜರದೊಳಗೆ ಕಳುಹಿಸಿಕೊಡಲಾಯಿತು.
ಎರಡೂವರೆ ಗಂಟೆಯ ಬಣ್ಣಗಾರಿಕೆಯ ಬಳಿಕ ದೈವ ಆವೇಶಭರಿತವಾಗಿ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬರುವ ಮೂಲಕ ಪಿಲಿಕೋಲ ಆರಂಭಗೊಂಡಿತು. ಪಂಜರದೊಳಗಿಂದ ಹೊರ ಬಂದ ಪಿಲಿಭೂತ ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಹಳೇ ಮಾರಿಗುಡಿ ಮುಂಭಾಗದಲ್ಲಿ ಹಾಕಲಾಗಿದ್ದ ಬಂಟ ಕಂಬವನ್ನು ಉರುಳಿಸಿ ಪಿಲಿ ಭೂತ ಬೇಟೆ ಕಾರ್ಯ ಪ್ರಾರಂಭಿಸಿತು.

ಸಹಸ್ರಾರು ಮಂದಿ ಭಾಗಿ

ಅವಿಭಜಿತ ದ.ಕ., ಉಡುಪಿ ಜಿಲ್ಲೆ ಮತ್ತು ಮುಂಬೈ ಸೇರಿದಂತೆ ವಿವಿಧೆಡೆಗಳಿಂದ ಅಸಂಖ್ಯಾತ ಸಂಖ್ಯೆಯ ಭಕ್ತರು ಮತ್ತು ಜಾನಪದಾಸಕ್ತರು ಪಿಲಿಕೋಲಕ್ಕೆ ಆಗಮಿಸಿದ್ದರು. ಹುಲಿಚಂಡಿ ದೈವಸ್ಥಾನ, ಹಳೇ ಮಾರಿಗುಡಿ ದೇವಸ್ಥಾನ, ಕೊರಗಜ್ಜ ದೈವಸ್ಥಾನ, ಮಹಾದೇವಿ ಪ್ರೌಢಶಾಲೆ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶಗಳು ಹಾಗೂ ರಾ.ಹೆ.66ರ ಇಕ್ಕೆಲಗಳಲ್ಲಿ ನಿಂತ ಭಕ್ತರು ಹುಲಿ ಭೂತದ ಸವಾರಿ ಮತ್ತು ಕೋಲದ ವೈಭವ ವೀಕ್ಷಿಸಿದರು. ಕಾಪು ಪಡು ಗ್ರಾಮದ ಭೇರುಗುತ್ತು, ದೊರೆಗಳಗುತ್ತು, ಅಯೋಧ್ಯಾ ಮನೆ, ಮಾತೃಛಾಯ ಮನೆ, ಸಾನದಮನೆ, ಗರಡಿಮನೆ, ಪಿಲಿಚಂಡಿ ಮನೆ ಸಹಿತವಾಗಿ 16 ಕಾಣಿಕೆ ಮನೆತನದರು, ಮಾರ ಗುರಿಕಾರ ವರ್ಗದವರು, ಕಾಪು ಸಾವಿರ ಸೀಮೆಯ ಭಕ್ತರು ಪಿಲಿಕೋಲಕ್ಕೆ ಸಂಬಂಧಪಟ್ಟ ಧಾರ್ಮಿಕ ಮತ್ತು ಜನಪದ ಸಂಪ್ರದಾಯಬದ್ಧ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ನಗರ ಪ್ರದಕ್ಷಿಣೆ

ಪಡು ಗ್ರಾಮದ ದೈವಸ್ಥಾನದ ಸುತ್ತಮುತ್ತಲಿನ ವ್ಯಾಪ್ತಿಯ ಸುಮಾರು 6-7 ಕಿ.ಮೀ. ವ್ಯಾಪ್ತಿಯಲ್ಲಿ ನಗರ ಪ್ರದಕ್ಷಿಣೆ ನಡೆಸಿದ್ದು, ಈ ವೇಳೆ ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆಗಳಲ್ಲಿ ಹಾಲು ಮತ್ತು ಸೀಯಾಳ ನೀಡಲಾಯಿತು. ಪಿಲಿ ಭೂತದ ಸಂಚಾರದ ವೇಳೆ ಹುಲಿಯ ಕೈಗೆ ಸಿಗುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನೆರೆದಿರುವ ಭಕ್ತರು ಚದುರಿ ಓಡುತ್ತಿರುವುದು ಕಂಡುಬಂತು. ಇದರ ನಡುವೆಯೂ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಮೂವರನ್ನು ಸ್ಪರ್ಶಿಸಿದೆ.