ಕಥಕ್ ನೃತ್ಯದ ಖ್ಯಾತ ಕಲಾವಿದ ಆಶಿಂಬಂಧು ಭಟ್ಟಾಚಾರ್ ಜೀ.
* ಪಂಡಿತ್ ಆಶಿಂಬಂಧು ಭಟ್ಟಾಚಾರ್ ಜೀ ಝಲಕ್
ಉಡುಪಿ: ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಉಡುಪಿ ಗೀತಾ ಮಂದಿರದಲ್ಲಿರುವ ಶ್ರೀಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಆ.28ರಂದು ಸಂಜೆ 6ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದ ಪಂಡಿತ್ ಆಶಿಂಬಂಧು ಭಟ್ಟಾಚಾರ್ ಜೀ ಅವರ 'ಕಥಕ್ ನೃತ್ಯ ಪ್ರದರ್ಶನ' ಆಯೋಜಿಸಲಾಗಿದೆ.
ನೃತ್ಯನಿಕೇತನ ಕೊಡವೂರು, ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು, ನಾಟ್ಯಾಯನ ಕಲಾ ಅಕಾಡೆಮಿ ಸಿದ್ದಕಟ್ಟೆ, ಸಂಸ್ಕಾರ ಭಾರತೀ ಉಡುಪಿ, ಲಕ್ಷ್ಮೀ ಗುರುರಾಜ್ ನೃತ್ಯ ನಿಕೇತನ ಉಡುಪಿ (ರಿ.) ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಶಿಂಬಂಧು ಭಟ್ಟಾಚಾರ್ ಜೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಭಾರತದ ಕಲಾವಿದ. ಪ್ರದರ್ಶಕ, ಶಿಕ್ಷಕ ಮತ್ತು ಅತ್ಯುತ್ತಮ ನೃತ್ಯ ಸಂಯೋಜಕರೂ ಆಗಿದ್ದಾರೆ. ಆರಂಭದಲ್ಲಿ ಪಂಡಿತ್ ರಾಮ್ಗೋಪಾಲ್ ಮಿಶ್ರಾ ಮತ್ತು ಸುಶ್ಮಿತಾ ಮಿಶ್ರಾ ಅವರಲ್ಲಿ ಜೈಪುರ ಘರಾನಾ ಕಥಕ್ನಲ್ಲಿ ತರಬೇತಿ ಪಡೆದರು. ನಂತರ ಪ್ರಸಿದ್ಧ ನೃತ್ಯ ಮಾಂತ್ರಿಕ ಪಂಡಿತ್ ವಿಜಯಶಂಕರ್ ಮತ್ತು ದಂತಕಥೆ ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜ್ ಜಿ ಅವರಿಂದ ಲಕ್ಕೋ ಘರಾನಾದ ವ್ಯತ್ಯಾಸಗಳನ್ನು ಕಲಿತರು.
ದೂರದರ್ಶನದ ಉನ್ನತ ದರ್ಜೆಯ ಕಲಾವಿದರಾಗಿದ್ದು, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ (ಐಸಿಸಿಆರ್) ಅತ್ಯುತ್ತಮ ಕಲಾವಿದ. ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಫೆಲೋಶಿಪ್ಗೂ ಭಾಜನರಾಗಿದ್ದಾರೆ. ಭಾರತ ಸರ್ಕಾರದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಅವರು ಅಮೆರಿಕ, ಜಪಾನ್, ಯುಕೆ, ರಷ್ಯಾ, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಹಂಗೇರಿ, ಸೆರ್ಬಿಯಾ, ಇಟಲಿ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ಕಥಕ್ ಪ್ರದರ್ಶನ ನೀಡಿದ್ದಾರೆ.
ಸುಂದರ ನೃತ್ಯ ಸಂಯೋಜನೆಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಓಂ ಶಕ್ತಿ, ವಾಸುದೇವ, ಘುಂಗ್ರೂ, ಅಂದಾಜ್ ಎ ಗಾಲಿಬ್, ಶಿಖಂಡಿನಿ, ಹೇ ಪುರುಷೋತ್ತೋಮ್, ಪ್ರತಿಬಿಂಬ, ಭೂಮಿ ಭಾಷಿತ್, ಹೇ ಮಹಾಮಾನವ್. ಮೂನ್ಸ್ಟ್ರಕ್ ಇತ್ಯಾದಿಗಳು ಖ್ಯಾತಿಗೊಂಡಿವೆ.
ಉಪಾಸನ ಸೆಂಟರ್ ಫಾರ್ ಡ್ಯಾನ್ಸ್ ಸಂಸ್ಥೆಯು ಅವರ ಶ್ರಮ, ಪ್ರೀತಿ ಮತ್ತು ಉತ್ಸಾಹದ ಫಲವಾಗಿದ್ದು, ಕೆಲವು ಹಿರಿಯ ಕಲಾವಿದರು ಮತ್ತು ವಿದ್ಯಾರ್ಥಿಗಳು ಭರವಸೆಯ ಕಥಕ್ ನೃತ್ಯಗಾರರಾಗಿ ಅರಳಿದ್ದಾರೆ.