ರಾಜ್ಯದ ಮೊದಲ ಪಟ್ಟಿಯಲ್ಲಿ ಕೆಪಿಎಸ್ ಆಗಿ ಪರಿವರ್ತನೆಗೊಂಡ ಉಡುಪಿ ಹಿರಿಯಡ್ಕದ ಸರ್ಕಾರಿ ಶಾಲೆ.
ಸರ್ಕಾರಿ ಶಾಲೆಗಳ ಉನ್ನತಿಗೆ ಕ್ರಮ
* ಖಾಸಗಿ ಸಂಸ್ಥೆಗಳ ಭಾಗಿದಾರಿಕೆಗೆ ಶ್ರಮ
ಖಾಸಗಿ ಶಾಲೆಗಳ ಭರಾಟೆ ಹಾಗೂ ಮಕ್ಕಳ ನೋಂದಣಿ ಕುಸಿತದಿಂದ ರಾಜ್ಯಾದ್ಯಂತ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿದೆ. ಹೀಗಾಗಿ ಇರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ 'ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)'ಗಳನ್ನಾಗಿ ಪರಿವರ್ತಿಸುತ್ತಿದ್ದು ಹೊಸ ಕಾರ್ಯಯೋಜನೆ ಅನುಷ್ಠಾನಗೊಳಿಸಿದೆ.
ರಾಜ್ಯದಲ್ಲಿರುವ 1 ಸಾವಿರ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತಿಸಲು ಸರ್ಕಾರ ಯೋಜಿಸಿದ್ದು, ಶಾಲಾ ಶಿಕ್ಷಣದಲ್ಲಿ 'ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಸಿಎಸ್ಆರ್)' ಎಂಬ ಕೋಶ ರಚಿಸಿದೆ. 'ಕರ್ನಾಟಕ ಪಬ್ಲಿಕ್ ಸ್ಕೂಲ್' ರಚನೆಗೆ 'ಸಪ್ತ ಸೂತ್ರ' ಅಳವಡಿಸಿದ್ದು, ಪ್ರತಿ ಜಿಲ್ಲೆಗೂ ಅಭಿವೃದ್ಧಿ ಪಡಿಸಬೇಕಾದ ಸರ್ಕಾರಿ ಶಾಲೆಗಳ ಪಟ್ಟಿ ನೀಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಲು 'ಉತ್ತಮ ಕಲಿಕೆ-ಉತ್ತಮ ಭವಿಷ್ಯ' ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಸ್ಥಾಪಿಸಿದೆ. ಈ ಮೊದಲು ಸರ್ಕಾರಿ ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಲು ಸರ್ಕಾರದ ಅನುಮತಿ ಬೇಕಿತ್ತು. ಇದೀಗ ಆಯಾ ಜಿಲ್ಲಾಧಿಕಾರಿಗೇ ಅಧಿಕಾರ ನೀಡಲಾಗಿದೆ. ಅದಕ್ಕಾಗಿ ಅವರೇ ಅಧ್ಯಕ್ಷರಾಗಿರುವ 'ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಸಿಎಸ್ಆರ್)' ಎಂಬ ಕೋಶ ರಚಿಸಲಾಗಿದೆ.
ಪ್ರತಿ ಗ್ರಾಪಂಗೆ 1 ಕೆಪಿಎಸ್
ಪ್ರಸ್ತುತ ಕೆಪಿಎಸ್ ಆಗಿ ಪರಿವರ್ತಿತ ಶಾಲೆಗಳು 8ರಿಂದ 15 ಗ್ರಾಮಗಳ ಸುಮಾರು 1.200 ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ನೀಡುತ್ತಿದೆ. ಪೂರ್ವ ಪ್ರಾಥಮಿಕದಿಂದ 5ನೇ ತರಗತಿಯವರಗೆ ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಬೋಧನೆ, 6ರಿಂದ 12ನೇ ತರಗತಿಯವರೆಗೆ ಕಂಪ್ಯೂಟರ್, ಕೌಶಲ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಭೌತಿಕ ಮೂಲ ಸೌಕರ್ಯ, ತರಬೇತಿ ಪಡೆದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆಗೆ ಸುಲಭವಾಗಿ ಬರಲು ಸಾರಿಗೆ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು, ರಾಜ್ಯಾದ್ಯಂತ ಪ್ರತಿ ಗ್ರಾಪಂಗೆ ಒಂದು ಕೆಪಿಎಸ್ ಸ್ಥಾಪಿಸುವ ಗುರಿ ಹೊಂದಲಾಗಿದೆ.
ಸಿಸಿಎಸ್ಆರ್ನ ಏಳು ಮಾನದಂಡಗಳು
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಿಸಿಎಸ್ಆರ್ ಕೋಶ ನಿರ್ವಹಣೆಯಡಿ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ 7 ಮಾನದಂಡ ಅಳವಡಿಸಲಾಗಿದೆ.
* ಗ್ರೀನ್ ಫೀಲ್ಡ್, ಬ್ರೌನ್ ಫೀಲ್ಡ್ ಕರ್ನಾಟಕ ಪಬ್ಲಿಕ್ ಶಾಲೆ, ಕಟ್ಟಡ ಅಭಿವೃದ್ಧಿ ಹಾಗೂ ಭೌತಿಕ ಮೂಲಸೌಕರ್ಯಗಳ ಪೂರೈಕೆ
* ಸುಸಜ್ಜಿತ ವಿಜ್ಞಾನ, ತಂತ್ರಜ್ಞಾನ, ಇಂಜನೀಯರಿಂಗ್, ಕಲೆ ಮತ್ತು ಗಣಿತ (ಎಸ್ಟಿಇಎಂ) ಶಿಕ್ಷಣಕ್ಕೆ ಸಹಕಾರ.
* ತರಬೇತಿ ಪಡೆದ ಶಿಕ್ಷಕರ ಪ್ರಾಯೋಜಕತ್ವ.
* ಉಚಿತವಾಗಿ ಶಾಲೆಗಳಿಗೆ ಸಾರಿಗೆ ವ್ಯವಸ್ಥೆ.
* ಸ್ಮಾರ್ಟ್ ಕ್ಲಾಸ್ ರೂಮ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂವಾದಾತ್ಮಕ ಕಲಿಕೆ.
* ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಪಸ್ ನಿಧಿಗೆ ಕೊಡುಗೆ ನೀಡುವುದು.
* 6ರಿಂದ 12ನೇ ತರಗತಿವರೆಗೆ ಕೌಶಲ ಶಿಕ್ಷಣ ಪಠ್ಯಕ್ರಮದೊಂದಿಗೆ ಕೌಶಲ ತರಬೇತಿ ನೀಡುವಲ್ಲಿ ಸಮುದಾಯ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಸಹಕಾರ ಪಡೆಯುವುದು.
ಮೇಲ್ವಿಚಾರಣಾ ಸಮಿತಿಗೆ ಸಿಎಂ ಅಧ್ಯಕ್ಷ
ಸಿಸಿಎಸ್ಆರ್ ಮಾರ್ಗಸೂಚಿಯಂತೆ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತಿಸಲು ಇತ್ತೀಚೆಗೆ ಉಡುಪಿಯಲ್ಲಿ ಸಭೆ ನಡೆಸಿದ್ದೇನೆ. 35ಕ್ಕೂ ಹೆಚ್ಚು ಸಮುದಾಯ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಭಾಗವಹಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತಮ್ಮ ಭಾಗಿದಾರಿಕೆ ಖಾತರಿ ಪಡಿಸಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
ಉಡುಪಿ ಜಿಲ್ಲೆಯಲ್ಲಿ 12, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28 ಸರ್ಕಾರಿ ಶಾಲೆಯನ್ನು ಕೆಪಿಎಸ್ ಮಾಡಲು ಗುರಿ ನೀಡಲಾಗಿದೆ. ಸರ್ಕಾರದ ಅನುದಾನದೊಂದಿಗೆ ಪಾಲುದಾರರು, ಸಂಘ-ಸಂಸ್ಥೆ, ಕಂಪನಿಗಳು, ಟ್ರಸ್ಟ್ ಹಾಗೂ ದಾನಿಗಳ ಆರ್ಥಿಕ ನೆರವು, ಕೊಡುಗೆಗಳ ಮೂಲಕ ಅಗತ್ಯ ಸೌಲಭ್ಯ ಒದಗಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡುವುದು ಉದ್ದೇಶವಾಗಿದೆ.
— ಲೋಕೇಶ್ ಸಿ. ಡಿಡಿಪಿಐ ಉಡುಪಿ.
ಯಾವುದೇ ದಾನಿಗಳು, ಸಂಘ-ಸಂಸ್ಥೆ, ಟ್ರಸ್ಟ್ ಅಥವಾ ಕಂಪನಿಯವರು ಸರ್ಕಾರಿ ಶಾಲೆಯೊಂದರ ಎಲ್ಲ ಅಗತ್ಯ ಶೈಕ್ಷಣಿಕ ಸೌಲಭ್ಯ ಪೂರೈಸಲು ಕೈಜೋಡಿಸಬಹುದು. ಯಾರಾದರೂ ಹೆಚ್ಚಿನ ಕೊಡುಗೆ ಅಥವಾ ಆರ್ಥಿಕ ಸಹಕಾರ ನೀಡಿದರೆ ಅಂತಹ ಶಾಲೆಗಳಿಗೆ ಅವರ ಹೆಸರನ್ನೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿಗಿಂತ ಮೊದಲು ಅಳವಡಿಸಲು ಸರ್ಕಾರ ನಿರ್ಧರಿಸಿದೆ.
— ಡಾ. ಅಶೋಕ್ ಕಾಮತ್. ಉಡುಪಿ ಡಯಟ್ ಪ್ರಾಂಶುಪಾಲ.