ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ನಿಗಮ ಅಧ್ಯಕ್ಷ ರಾಮಪ್ಪ ಮಾತನಾಡಿದರು.  
ಉಡುಪಿ

ಭೋವಿ ಸಮಾಜಕ್ಕೆ ಜಾತಿ ಪ್ರಮಾಣಪತ್ರ ವಿತರಿಸಲು ಕ್ರಮ: ನಿಗಮ ಅಧ್ಯಕ್ಷ ರಾಮಪ್ಪ

ಕರ್ನಾಟಕ ಭೋವಿ (ವಡ್ಡರ) ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಗತಿ ಪರಿಶೀಲನ ಸಭೆ

ಉಡುಪಿ: ಅತೀ ಕಡು ಬಡವ ಭೋವಿ ಜನಾಂಗವು ಜಿಲ್ಲೆಯಲ್ಲಿ ತಮ್ಮ ಜೀವನಪಾಯಕ್ಕಾಗಿ ಬೇರೆ ಬೇರೆ ಕಡೆಗಳಿಂದ ಬಂದು ನೆಲೆಸಿ ವಿವಿಧ ಕುಲ ಕಸುಬುಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅವಶ್ಯವಿದ್ದು, ಸಮುದಾಯದವರು ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಾಗ ಕಂದಾಯ ಇಲಾಖೆಯ ಅಧಿಕಾರಿಗಳು ಮುತುವರ್ಜಿ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಭೋವಿ (ವಡ್ಡರ) ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೋವಿ ಸಮುದಾಯದ ಮಕ್ಕಳನ್ನು ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಬೇಕು. ಸಮುದಾಯದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವಾಗ ಜಾತಿ, ಉಪಜಾತಿ ಸೇರಿದಂತೆ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ನಂತರ ದಾಖಲು ಮಾಡಿಕೊಳ್ಳುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ತಿಳಿಸಬೇಕು ಎಂದರು.

ರಾಜ್ಯ ಸರ್ಕಾರ ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಭೋವಿ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ 6 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಭೋವಿ ಜನಾಂಗದ ಕುಲಕಸುಬಾದ ಕಲ್ಲು ಒಡೆಯುವುದು, ಆಗಿದ್ದು, ಸರ್ಕಾರ ಮೂಲ ವೃತ್ತಿ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 2 ಎಕರೆ ವರೆಗೆ ಕಲ್ಲು ಕೋರೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಈಗಾಗಲೆ 21 ಜನ ಅರ್ಜಿ ಸಲ್ಲಿಸಿದ್ದು, ಆದರೆ ಕೇವಲ ಎರಡು ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಉಳಿದ ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಲು ಕಳುಹಿಸಲಾಗಿದೆ. ಮುಂದಿನ ಎರಡು ತಿಂಗಳ ಒಳಗಾಗಿ ನಿಯಮಾನುಸಾರವಾಗಿ ಕೋರೆಗಳನ್ನು ನೀಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಶಾಸಕ ಸುನಿಲ್​ ಕುಮಾರ್​ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಸಮುದಾಯವಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಉಭಯ ಜಿಲ್ಲೆಗಳಲ್ಲಿ ಭೋವಿ ಸಮುದಯದವರಿಗೆ ಕಂದಾಯ ಅಧಿಕಾರಿಗಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರವು ವಿದ್ಯಾಭ್ಯಾಸ, ಉದ್ಯೋಗಕ್ಕ ಅತ್ಯಾವಶ್ಯವಾಗಿದ್ದು, ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಸಭೆ ನಡೆಸಿ, ಸ್ಪಷ್ಟ ತೀಮಾರ್ನ ಕೈಗೊಂಡು ಸಮುದಾಯದವರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಜಿಲ್ಲೆಯಲ್ಲಿ ಭೋವಿ ಸಮುದಾಯ ಭವನ ನಿಮಾರ್ಣ ಮಾಡಬೇಕೆಂದು ಸಮುದಾಯದ ಜನರಿಂದ ಬೇಡಿಕೆ ಇದ್ದು, ಭವನ ನಿಮಾರ್ಣ ಮಾಡಲು ಮಾನದಂಡಕ್ಕೆ ಅನುಗುಣವಾಗಿ ಸಿ.ಎ ಸೈಟ್​ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್​ ಮಾತನಾಡಿದರು. ಶಾಸಕ ಯಶ್​ಪಾಲ್​ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ ಹಾಗೂ ಗುರುರಾಜ್​ ಶೆಟ್ಟಿ ಗಂಟಿಹೊಳೆ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ ನಾಯಕ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಕುಂದಾಪುರ ಸಹಾಯಕ ಕಮಿಷನರ್​ ರಶ್ಮಿ, ದಕ್ಷಿಣ ಕನ್ನಡ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಹೇಮಲತಾ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ ಮುಲ್ಲಾರ್​ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿ, ಪ್ರಶಾಂತ್​ ಶೆಟ್ಟಿ ಹಾವಂಜೆ ನಿರೂಪಿಸಿ ವಂದಿಸಿದರು.