ಕಲ್ಯಾ ಗ್ರಾಮದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿರುವುದು. 
ಉಡುಪಿ

ಕಾರ್ಕಳದ ಬಳ್ಳಾರಿ ಕಲ್ಯಾ!

ಲಾರಿಗಳಲ್ಲಿ ಹಗಲು-ರಾತ್ರಿ ಕಲ್ಲು ಸಾಗಾಟ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳದ ಗ್ರಾಮೀಣ ಭಾಗವಾದ ಕಲ್ಯಾ ಗ್ರಾಮದಲ್ಲಿ ಅಧಿಕೃತ ದಾಖಲೆಗಳು ಮತ್ತು ಪರವಾನಗಿಗಳಿಲ್ಲದೆ ಬೃಹತ್ ಪ್ರವಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಭಾಗದಲ್ಲಿ ಏಳರಿಂದ ಎಂಟು ಅಕ್ರಮ ಕ್ವಾರಿಗಳು ಇದ್ದು, ಸರ್ಕಾರಕ್ಕೆ ರಾಜಧನ ನೀಡದೆ ಗಣಿಗಾರಿಕೆ ನಡೆಸುತ್ತಿವೆ. ನಿರಂತರವಾಗಿ ಬೃಹತ್ ಗಾತ್ರದ ಲಾರಿಗಳ ಓಡಾಟ, ಧೂಳಿನಿಂದ ಕಲ್ಯಾ ಕಾರ್ಕಳದ ಮಿನಿ ಬಳ್ಳಾರಿಯಂತಾಗಿದೆ ಎನ್ನುವ ಗಂಭೀರ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ.

ಮಲ್ಲಯಬೆಟ್ಟು ಹಾಗೂ ಕುಂಟಾಡಿಗೆ ಸಾಗುವ ರಸ್ತೆಯುದ್ದಕ್ಕೂ ಹಲವು ಅನಧಿಕೃತ ಕಲ್ಲು ಕ್ವಾರಿಗಳು ಕಾರ್ಯಾಚರಿಸುತ್ತಿವೆ. ಬಹುತೇಕ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಕೂಡ ನಡೆಯುತ್ತಿದ್ದು, ಭೂಮಿ ಕಂಪಿಸುತ್ತದೆ. ಅಕ್ರಮವಾಗಿ ತೆಗೆಯಲಾಗುತ್ತಿರುವ ಕಲ್ಲುಗಳನ್ನು ಬೃಹತ್ ಪ್ರವಾಣದಲ್ಲಿ ಕೇರಳಂಗೆ ರಫ್ತು ವಾಡಲಾಗುತ್ತಿದೆ. ಇಲ್ಲಿಂದ ಪ್ರತಿದಿನ ಟನ್‌ಗಟ್ಟಲೆ ಭಾರ ತುಂಬಿಕೊಂಡು ಹಗಲು-ರಾತ್ರಿ ಎನ್ನದೆ ಚಲಿಸುವ ಕೇರಳ ನೋಂದಣಿಯ 12ರಿಂದ 18 ಚಕ್ರಗಳ ಭಾರಿ ಲಾರಿಗಳು ಹಾಗೂ ವಾಹನಗಳ ಅಬ್ಬರದಿಂದ ಜನರ ನೆಮ್ಮದಿ ಹಾಳಗಿದೆ. ಕೆಲವೊಂದು ಭಾಗದಲ್ಲಿ ಕೃಷಿಭೂಮಿ ಸಮತಟ್ಟು ವಾಡಲೆಂದು 3ಎ ಪರವಾನಗಿ ಪಡೆದು ರಾಜಾರೋಷವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಆರೋಪಗಳಿವೆ.

ಸಾರ್ವಜನಿಕರ ಆಗ್ರಹ

ಅಕ್ರಮ ಗಣಿಗಾರಿಕೆಯಿಂದಾಗಿ ಪರಿಸರ ನಾಶವಾಗುತ್ತಿರುವುದಲ್ಲದೆ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ರಾಜಸ್ವ ನಷ್ಟವನ್ನು ಕೂಡಲೇ ತಡೆಯಬೇಕಿದೆ. ಜಿಲ್ಲಾಧಿಕಾರಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಕ್ಷಣ ಈ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮ ಕ್ವಾರಿಗಳನ್ನು ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗ್ರಾಮಸ್ಥರಿಂದ ದೂರು

ಕಲ್ಯಾ ಹಾಳೆಕಟ್ಟೆಯಿಂದ ಮಲ್ಲಯಬೆಟ್ಟು ರಸ್ತೆ ಹಾಗೂ ಮುಂದೆ ಕುಂಟಾಡಿಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿರುವುದರಿಂದ ದ್ವಿಚಕ್ರ ಹಾಗೂ ರಿಕ್ಷಾ ಚಾಲಕರಿಗೆ ಬಹಳ ಕಷ್ಟವಾಗಿದೆ. ದೊಡ್ಡ ಗಾತ್ರದ ಲಾರಿ ಹೋಗುವಾಗ ಪರಿಸರ ಧೂಳುಮಯವಾಗುತ್ತದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಎಲ್ಲರೂ ಈ ರಸ್ತೆಯಲ್ಲೇ ಪ್ರಯಾಣಿಸಬೇಕಾಗಿದೆ. ಡಾಮರು ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು, ಕಾಲ್ನಡಿಗೆಗೂ ಅಯೋಗ್ಯವಾಗಿದೆ.

ಎರಡು ಕ್ವಾರಿಗಳ ಮೇಲೆ ಕೇಸು

ಸ್ಫೋಟಕ ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಕಲ್ಯಾ ಗ್ರಾಮದ ಬಡಕಾಯಿ ಕಾಡು ದರ್ಖಾಸು ಸರ್ವೇ ನಂಬರ್ 247/1ಎಯಲ್ಲಿ ಅಕ್ರಮ ನಡೆಯುತ್ತಿದೆ. ಅದರ ಪಕ್ಕದಲ್ಲೇ ಡಿಸಿ ಮನ್ನಾ ಜಾಗ ಸರ್ವೇ ನಂಬರ್ 254ರ ಆಸುಪಾಸಿನಲ್ಲಿ ಕೂಡ ತುಂಬಾ ಆಳದವರೆಗೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಹಾಗೂ ದಡ್ಡು ನೆಕ್ಕರೆ ಪಲ್ಕೆ ಭಾಗದಲ್ಲೂ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ನೀಡಿದ ಬೆನ್ನಲ್ಲೆ ಪೊಲೀಸರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಎರಡು ಕ್ವಾರಿಗಳ ವಿರುದ್ಧ ಕೇಸು ದಾಖಲಿಸಿದ್ದರು.

ಧೂಳಿನ ಸಮಸ್ಯೆ

ವಾಹನಗಳು ಸಾಗುವಾಗ ಏಳುವ ಧೂಳಿನ ಅಲೆಗಳಿಂದಾಗಿ ರಸ್ತೆಯ ಪಕ್ಕದ ಮನೆಗಳ ನಿವಾಸಿಗಳು ಮತ್ತು ಕೃಷಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಧೂಳಿನಿಂದಾಗಿ ಉಸಿರಾಟ ಮತ್ತು ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜನರಿಗೆ ಅಸ್ತಮಾದಂಥ ಕಾಯಿಲೆಗಳು ಬರುತ್ತಿವೆ.

ಅಧಿಕಾರಿಗಳು ಮೌನ!

ಪರವಾನಗಿ ಇಲ್ಲದ ಗಣಿಗಾರಿಕೆ ವಾಫಿಯಾದ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿಮಟ್ಟದಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುತ್ತಿಲ್ಲ. ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾಗ ಅಧಿಕಾರಿಗಳು ಅಕ್ರಮ ಕ್ವಾರಿಗಳಿಗೆ ದಾಳಿ ವಾಡುತ್ತಾರೆ. ಸ್ವಲ್ಪ ದಿನ ಕಳೆದರೆ ಮತ್ತೆ ಅದೇ ಪರಿಸ್ಥಿತಿ ಮುಂದುವರಿಯುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿದೆ.

ಇಡೀ ಕಲ್ಯಾ ಗ್ರಾಮದಲ್ಲಿ ಅನಧಿಕೃತ ಕೋರೆ ಹಾಗೂ ಗಣಿಗಾರಿಕೆಯಿಂದ ಜನರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಭಾರಿ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಶಾಲಾ ಮಕ್ಕಳು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.
ಬ್ರಹ್ಮಋಷಿ ಉವಾಮಹೇಶ್ವರ ಸ್ವಾಮೀಜಿ ಸ್ಥಳೀಯ ಧಾರ್ಮಿಕ ಪ್ರಮುಖರು
ಈ ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳು ಬಹುತೇಕ ಅನಧಿಕೃತವಾಗಿದೆ. ಯಾವುದೇ ಪರವಾನಗಿ ಪಡೆಯದೆ ಹಗಲು-ರಾತ್ರಿ ಕಾರ್ಯಾಚರಿಸುತ್ತಿವೆ. ಗಣಿಗಾರಿಕೆಯಿಂದಾಗಿ ಈ ಭಾಗದ ರಸ್ತೆಗಳು ಸಂಪೂರ್ಣ ನಾಶವಾಗಿವೆ. ಈ ಬಗ್ಗೆ ಸೂಕ್ತ ಕ್ರಮದ ಅಗತ್ಯವಿದೆ.
ಸತೀಶ್ ಪೂಜಾರಿ ಗ್ರಾಮಸ್ಥ