ಕಾರ್ಕಳ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳ ತಾಲೂಕು ಕಾರ್ಕಳ ಹೋಬಳಿಯ ಕಂದಾಯ ನಿರೀಕ್ಷಕರಾಗಿದ್ದ ನಂದಳಿಕೆ ಶಿವಪ್ರಸಾದ್ ರಾವ್ ಶುಕ್ರವಾರ ಮೃತಪಟ್ಟಿದ್ದಾರೆ.
ಶಿವಪ್ರಸಾದ್ ರಾವ್ ಜುಲೈ 12ರಂದು ಸಂಜೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಮೀಟಿಂಗ್ ಮುಗಿಸಿ ರಾತ್ರಿ 7.30ರ ಸುಮಾರಿಗೆ ತನ್ನ ಮನೆ ನಂದಳಿಕೆ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಶಿವತಿಕೆರೆ ಬಳಿಯ ನಾಯರ ಪೆಟ್ರೋಲ್ ಬಂಕ್ ಬಳಿ ಇಂಡಿಕೇಟರ್ ಹಾಕಿ ಯೂಟರ್ನ್ ತೆಗೆದುಕೊಳ್ಳಲು ಮುಂದಾದಾಗ ಹಿಂದಿನಿಂದ ಅತಿ ವೇಗವಾಗಿ ಸ್ಕೂಟರ್‌ನಲ್ಲಿ ಬಂದ ಯುವಕ ನಿಯಂತ್ರಣ ತಪ್ಪಿ ಶಿವಪ್ರಸಾದ್ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಶಿವಪ್ರಸಾದ್ ಅವರ ತಲೆಗೆ ಗಂಭೀರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.