ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿ ಪರಿಶೀಲನೆ ಹಾಗೂ ತರಬೇತಿ ಸಭೆಯಲ್ಲಿ ಉದ್ದೇಶಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ವಾತನಾಡಿದರು. ಪ್ರಮುಖರಾದ ಅಬೀದ್ ಗದ್ಯಾಳ್, ಸುಬ್ರಹ್ಮಣ್ಯ ಶೆಟ್ಟಿ, ಪ್ರದೀಪ್ ಆರ್. ಮೊದಲಾದವರಿದ್ದರು. 
ಉಡುಪಿ

ಮ್ಯಾಪಿಂಗ್ ನಲ್ಲಿ ಕಾರ್ಕಳ ಮುಂಚೂಣಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕಾರ್ಕಳ
ಮ್ಯಾಪಿಂಗ್ ಕಾರ್ಯದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದೆ. ಮ್ಯಾಪಿಂಗ್ ಪ್ರಕ್ರಿಯೆ ಸಂಪೂರ್ಣ ಸರಿಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಗೊಂದಲಗಳಿದ್ದಲ್ಲಿ ವಿಚಾರಣೆ ಮೂಲಕ ಪರಿಶೀಲನೆ ನಡೆಸಲಾಗುವುದು. ಪೌರತ್ವ ಹೊಂದಿರುವ ಹಾಗೂ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಅರ್ಹರಾಗಿದ್ದಾರೆ. ವಿಚಾರಣೆಗೆ ಹಾಜರಾಗದ ಹಾಗೂ ಅನರ್ಹ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುವುದು. ಬಿಎಲ್‌ಒ ಹಾಗೂ ಬಿಎಲ್‌ಎಗಳಿಗೆ ಗೊಂದಲಗಳ ನಿವಾರಣೆಗಾಗಿ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಬುಧವಾರ ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿ ಪರಿಶೀಲನೆ ಹಾಗೂ ತರಬೇತಿ ಸಭೆಯನ್ನು ಉದ್ದೇಶಿಸಿ ವಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಬಿಎಲ್‌ಒಗಳಿಗೆ ವ್ಯಾಪಿಂಗ್ ಕಂಪ್ಲೀಷನ್, ಎಲಿಮಿನೇಷನ್ ಫಾರಂ ಭರ್ತಿ ಹಾಗೂ ಕ್ಲೈಮ್ ಆ್ಯಂಡ್ ಅಬ್ಜೆಕ್ಷನ್ ಅವಧಿ ಎಂಬ ಮೂರು ಪ್ರಮುಖ ಹಂತಗಳಿರುತ್ತವೆ. ಬಿಎಲ್‌ಒ ಮತ್ತು ಬಿಎಲ್‌ಎಗಳ ನಡುವೆ ಸೂಕ್ತ ಸಮನ್ವಯ ಸಾಧಿಸುವುದು ಮುಖ್ಯವಾಗಿದೆ. ಮತದಾರರ ಪಟ್ಟಿ ಕ್ಲೀನ್ ಆಗಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಒಳಿತು. ಯಾವುದೇ ಒಬ್ಬ ಅರ್ಹ ಮತದಾರ ಹೊರಗುಳಿಯಬಾರದು ಮತ್ತು ಅನರ್ಹ ವ್ಯಕ್ತಿ ಪಟ್ಟಿಯೊಳಗೆ ಸೇರಬಾರದು ಎಂದು ಸ್ಪಷ್ಟಪಡಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಆರ್., ಕಂದಾಯ ಇಲಾಖೆಯ ಅಧಿಕಾರಿಗಳು, ಬಿಎಲ್‌ಒಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಿಯೋಜಿತ ಮತಗಟ್ಟೆ ಏಜೆಂಟರು ಉಪಸ್ಥಿತರಿದ್ದರು.