ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಉದ್ಯಾವರ ಬಲಾಯಿಪಾದೆಯಲ್ಲಿ ವಶಕ್ಕೆ ಪಡೆದರು.
ಉಡುಪಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರನ್ನು ಪೊಲೀಸರು ಉದ್ಯಾವರ ಬಲಾಯಿಪಾದೆಯಲ್ಲಿ ವಶಕ್ಕೆ ಪಡೆದರು.
ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಮುಖ್ಯಮಂತ್ರಿ ವಿಜಯ್ ಅವರ ವಾಹನ ಸಂಚಾರಕ್ಕೂ ಮುನ್ನವೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು. ಕರವೇ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಜಯ್ ವಾಪಾಸ್ ತೆರಳಿದ ಬಳಿಕ ಬಿಡುಗಡೆಗೊಳಿಸಿದರು.
ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದಲೇ ನೇರವಾಗಿ ಕೊಲ್ಲೂರಿಗೆ ತೆರಳಿದರು. ಉಡುಪಿಯಲ್ಲಿ ಭೋಜನ ವ್ಯವಸ್ಥೆ ಕೊನೆ ಕ್ಷಣದಲ್ಲಿ ರದ್ದಾಗಿದ್ದು, ಖಾಸಗಿ ಹೋಟೆಲ್ ಬಳಿ ಹಾಗೂ ಮಾರ್ಗದುದ್ದಕ್ಕೂ ಜಮಾಯಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.
ವೇಳಾಪಟ್ಟಿಯ ಪ್ರಕಾರ ವಿಜಯ್ ಅವರು ಉಡುಪಿಗೆ ಆಗಮಿಸಿದ ಬಳಿಕ ಕರಾವಳಿ ಬೈಪಾಸ್ ಸಮೀಪದ ಖಾಸಗಿ ಹೋಟೆಲ್ಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು, ಭೋಜನ ಸ್ವೀಕರಿಸಿ ಬಳಿಕ ಕೊಲ್ಲೂರಿಗೆ ಪ್ರಯಾಣ ಬೆಳೆಸಬೇಕಿತ್ತು. ವಿಜಯ್ಗಾಗಿ 3 ರೂಂಗಳನ್ನು ಕಾದಿರಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಕೂಡ ಕೈಗೊಂಡಿದ್ದರು. ಆದರೆ ಸಮಯದ ಅಭಾವದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡ ಅವರು ರಸ್ತೆ ಬದಿ ನಿಂತಿದ್ದ ಅಭಿಮಾನಿಗಳಿಗೆ ಕೈ ಬೀಸಿ ನೇರವಾಗಿ ಕೊಲ್ಲೂರಿಗೆ ತೆರಳಿದ್ದರು.