ಉಡುಪಿ ಬೈಲೂರಿನ ಕೊರಂಗ್ರಪಾಡಿಯಲ್ಲಿ ರಂಗ ಕಲಾವಿದ ವಿವೇಕಾನಂದ್ ಎನ್. ಹಾಗೂ ಶಶಿಪ್ರಭಾ ದಂಪತಿ ಮನೆಯಲ್ಲಿ ಅಭಿಯಾನಕ್ಕೆ ನಾಡೋಜ ಪ್ರೊ. ಕೆ.ಪಿ. ರಾವ್ ಚಾಲನೆ ನೀಡಿದ್ದರು. (ಸಾಂದರ್ಭಿಕ ಚಿತ್ರ)
* ಗಮನ ಸೆಳೆದ ಕಸಾಪ ಉಡುಪಿ ಘಟಕದ ಅಭಿಯಾನ
* ಮನಸ್ಸುಗಳ ಬೆಸೆಯುತ್ತಿದೆ ಸಾಹಿತ್ಯಿಕ ಜ್ಞಾನ
ಒಳ್ಳೆಯ ಉದ್ದೇಶ ಅಥವಾ ಜನಜಾಗೃತಿಗಾಗಿ ಸರ್ಕಾರ ಅಥವಾ ಸಂಘ-ಸಂಸ್ಥೆಗಳಿಂದ ಅದೆಷ್ಟೋ ಬಗೆಯ ಅಭಿಯಾನ ಆರಂಭಗೊಳ್ಳುತ್ತವೆ. ಅವುಗಳಲ್ಲಿ ಬಹುತೇಕ ಅಭಿಯಾನ ದಿಕ್ಕು-ದೆಸೆಯಿಲ್ಲದೆ ನಶಿಸಿಹೋಗುತ್ತವೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ಘಟಕದ 'ಮನೆಯೇ ಗ್ರಂಥಾಲಯ' ಅಭಿಯಾನ ಯಶಸ್ಸಿನೊಂದಿಗೆ ನಾಡಿನ ಗಮನ ಸೆಳೆಯುತ್ತಿದೆ.
ಎರಡೂವರೆ ವರ್ಷದ ಹಿಂದೆ ಕಸಾಪ ಉಡುಪಿ ಘಟಕ ಆರಂಭಿಸಿದ್ದ 'ಮನೆಯೇ ಗ್ರಂಥಾಲಯ' ಅಭಿಯಾನ ಇದೀಗ ದ್ವಿಶತಕ ಬಾರಿಸಿದೆ. ಮನೆ, ಅಂಗಡಿ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿಯೂ ಗ್ರಂಥಾಲಯ ತೆರೆಯಲಾಗಿದೆ. ಉಡುಪಿ ತಾಲೂಕನ್ನು 'ಪುಸ್ತಕಗಳ ತವರು' ಮಾಡುವುದು ಅಭಿಯಾನದ ಉದ್ದೇಶ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಂದಿನ ಡಿಸಿ ವಿದ್ಯಾಕುಮಾರಿ ಅವರು ಗ್ರಂಥಾಲಯ ಉದ್ಘಾಟಿಸಿರುವುದು. 'ಮನೆಯೇ ಗ್ರಂಥಾಲಯ'ವು ಕಸಾಪ ಉಡುಪಿ ತಾಲೂಕು ಘಟಕದ ಬಹುದೊಡ್ಡ ಅಭಿಯಾನ. ಇದು ಪುಸ್ತಕಗಳ ಕುರಿತಾಗಿ ಇರುವ ಅಭಿಮಾನ. ಪುಸ್ತಕ ಓದಲು ನಗರದಲ್ಲಿರುವ ಗ್ರಂಥಾಲಯಕ್ಕೇ ಹೋಗಬೇಕು ಎಂಬ ತೊಡಕು ನಿವಾರಿಸುತ್ತದೆ. ಪುಸ್ತಕವೇ ಜನರ ಬಳಿಗೆ ಬರುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಓದು ತಲುಪಿದೆ. 200ನೇ ಗ್ರಂಥಾಲಯವು ನಮ್ಮ ಅಭಿಯಾನದ ಬೃಹತ್ ಮೈಲಿಗಲ್ಲು. ಇದು ಉಡುಪಿಯಲ್ಲಿ ಓದುವ ಸಂಸತಿಗೆ ಲಭಿಸಿದ ಗೆಲುವು. ಸಂದ ಪದಾಧಿಕಾರಿಗಳ ಪ್ರೋತ್ಸಾಹ, ವಿಶೇಷವಾಗಿ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಅವರ ಆಸಕ್ತಿ, ಶ್ರಮ ಈ ಯಶಸ್ಸಿಗೆ ಕಾರಣ ಎನ್ನುತ್ತಾರೆ ಅಧ್ಯಕ್ಷ ರವಿರಾಜ್ ಎಚ್.ಪಿ.
'ಮನೆಯೇ ಗ್ರಂಥಾಲಯ' ಎಂಬ ವಿನೂತನ ಕಾರ್ಯಕ್ರಮದ ಮೊದಲ ಗ್ರಂಥಾಲಯವನ್ನು 2024ರ ಮೇ 21ರಂದು ಉಡುಪಿ ತಾಲೂಕಿನ ಬೈಲೂರು ಕೊರಂಗ್ರಪಾಡಿಯಲ್ಲಿರುವ ರಂಗ ಕಲಾವಿದರಾದ ವಿವೇಕಾನಂದ್ ಎನ್. ಹಾಗೂ ಶಶಿಪ್ರಭಾ ದಂಪತಿ ಮನೆಯಲ್ಲಿ ಉದ್ಘಾಟಿಸಲಾಗಿತ್ತು. ಹಿರಿಯ ವಿದ್ವಾಂಸ, ನಾಡೋಜ ಪ್ರೊ. ಕೆ.ಪಿ. ರಾವ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆರೇಳು ತಿಂಗಳ ಹಿಂದೆ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರವು 'ಮನೆಗೊಂದು ಗ್ರಂಥಾಲಯ' ಹೆಸರಿನಲ್ಲಿ ರಾಜ್ಯಾದ್ಯಂತ ಅಭಿಯಾನ ಆರಂಭಿಸಿದೆ. ಸರ್ಕಾರದ ಈ ಅಭಿಯಾನಕ್ಕೂ ಉಡುಪಿ ಕಸಾಪದ 'ಮನೆಯೇ ಗ್ರಂಥಾಲಯ' ಮಾದರಿಯಾಗಿದೆ.
ಡಿಡಿಪಿಯು ಕಚೇರಿಯಲ್ಲಿ ಜೂ.29ಕ್ಕೆ ಉದ್ಘಾಟನೆ
ಕಸಾಪ ಉಡುಪಿ ತಾಲೂಕು ಘಟಕದ 'ಮನೆಯೇ ಗ್ರಂಥಾಲಯ'ದ 200ನೇ ಗ್ರಂಥಾಲಯವನ್ನು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಡಿಡಿಪಿಯು ಕಚೇರಿಯಲ್ಲಿ ಜೂ.29ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸಂಸ್ಥಾಪಕ ಯು.ವಿಶ್ವನಾಥ್ ಶೆಣೈ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಎಲ್., ಕಸಾಪ ಉಡುಪಿ ತಾಲೂಕು ಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಪಾಲ್ಗೊಳ್ಳಲಿದ್ದಾರೆ.
ಇದು ಸಂಖ್ಯೆಗಾಗಿ ಮಾಡುತ್ತಿರುವ ಅಭಿಯಾನವಲ್ಲ. ಜನರಲ್ಲಿ ಕನ್ನಡ ಓದುವ ಆಸಕ್ತಿ ಹೆಚ್ಚಿಸಲು, ಮೊಬೈಲ್ ಗೀಳಿನಿಂದ ಕಿಂಚಿತ್ ಸಮಯವಾದರೂ ಹೊರಬರಲೆಂದು ಆರಂಭಿಸಿರುವ ಚಳವಳಿ. ಎಲ್ಲ ಬಗೆಯ ಸಾಹಿತ್ಯ, ಪುರಾಣ, ಕಾದಂಬರಿಗಳನ್ನು ಕೊಡುತ್ತಿದ್ದೇವೆ. ಈವರೆಗೆ 4 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ನೀಡಿದ್ದೇವೆ. ಮನೆಗಳಲ್ಲಿ ಓದಿದ ಆ ಪುಸ್ತಕ ಇನ್ನಿತರ ಮನೆಗಳಿಗೂ ಬದಲಾಗುತ್ತಲೂ ಇದೆ. ಇದು ಅಭಿಯಾನದ ವೈಶಿಷ್ಟ್ಯ.
— ರವಿರಾಜ್ ಎಚ್.ಪಿ. ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ.
ಜ್ಞಾನದ ಕಲೆಯ, ಸಾಹಿತ್ಯದ ನೆಲಬೀಡಾದ ಉಡುಪಿಯಲ್ಲಿ ಕಸಾಪ ಉಡುಪಿ ಘಟಕದ 'ಮನೆಯೇ ಗ್ರಂಥಾಲಯ' ಅಭಿಯಾನ ಶ್ಲಾಘನೀಯ ಕೆಲಸ. ಮನೆಯ ಕಪಾಟಿನಲ್ಲಿರುವ ಒಂದಿಷ್ಟು ಉತ್ತಮ ಪುಸ್ತಕಗಳು ಆ ಮನೆಯ ಭೌತಿಕ ಶ್ರೀಮಂತಿಕೆ ಸಾರುತ್ತದೆ. ಹಿರಿಯರು ಪುಸ್ತಕ ಓದಿದರೆ ಮನೆಯಲ್ಲಿರುವ ಮಕ್ಕಳೂ ಸಹ ಓದುವ ಆಸಕ್ತಿ ತೋರುತ್ತಾರೆ. ಅದರಿಂದ ಪ್ರತಿ ಮನೆಯೂ ಅಕ್ಷರ, ಜ್ಞಾನ ಬೆಳಗುವ ಮಂದಿರವಾಗಲು ಸಾಧ್ಯ.
— ಪೂರ್ಣಿಮಾ. ಜಿಲ್ಲಾ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ.