ಉಡುಪಿಯಲ್ಲಿ ಡಾ.ರಾಜ್​ಕುಮಾರ್​ ಜಯಂತಿ ಆಚರಿಸಲಾಯಿತು. ಯಶ್​ಪಾಲ್​ ಸುವರ್ಣ, ರಾಜೀವ್​ ಶೆಟ್ಟಿ, ಪ್ರತಿಮಾ ನಾಯಕ್​, ಪುರುಷೋತ್ತಮ್​ ನಾಯಕ್​, ಡಾ.ನಿಕೇತನಾ, ಡಾ. ಗಣನಾಥ್​ ಶೆಟ್ಟಿ ಎಕ್ಕಾರ್​, ರಮಾದೇವಿ ಇದ್ದರು. 
ಉಡುಪಿ

ಅಭಿಮಾನಿಗಳ ಹೃದಯದ ಕಣ್ಮಣಿ ಡಾ.ರಾಜ್​

* ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

* ಉಡುಪಿಯಲ್ಲಿ ವರನಟನ ಜಯಂತಿ ಉದ್ಘಾಟನೆ

ಉಡುಪಿ: ಕನ್ನಡ ಸಿನಿಮಾ ರಂಗದ ಅತ್ಯದ್ಭುತ ನಟರಾಗಿದ್ದ ಡಾ.ರಾಜ್​ಕುಮಾರ್​ ಅಮೋಘ ನಟನಾ ಸಾಮರ್ಥ್ಯ ಹೊಂದಿದ್ದರು. ಪೌರಾಣಿಕ, ಸಾಮಾಜಿಕ ಕಥಾನಕದ ಯಾವುದೇ ಪಾತ್ರವನ್ನಾದರೂ ನಿರರ್ಗಳವಾಗಿ ಅಭಿನಯಿಸುವ ವರನಟರು. ಅದ್ಭುತ ಗಾಯಕರೂ ಆಗಿದ್ದ ಅವರ ಕಂಠಸಿರಿ ಸದಾ ಅಮರತ್ವ ಪಡೆದಿದೆ. ನಟನೆಯ ಮೂಲಕವೇ ಜೀವನ ಮೌಲ್ಯ ಸಾರುವ ಮೂಲಕ ಅಪಾರ ಅಭಿಮಾನಿಗಳ ಹೃದಯದ ಕಣ್ಮಣಿಯಾಗಿದ್ದಾರೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ರೆಡ್​ ಕ್ರಾಸ್​ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್​ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ (ಏ.24) ಆಯೋಜಿಸಿದ್ದ ವರನಟ ಡಾ.ರಾಜ್​ಕುಮಾರ್​ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಚ್ಚಳಿಯದ ಮೇರುನಟ

ಭಾರತೀಯ ರೆಡ್​ಕ್ರಾಸ್​ನ ರಾಜ್ಯ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಮಾತನಾಡಿ, ಜೀವಿತಾವಧಿಯಲ್ಲಿ ಸಾಧನೆಗಳ ಸರಮಾಲೆಯನ್ನೇ ಮುಡಿಗೆರಿಸಿಕೊಂಡವರು ಡಾ.ರಾಜ್​. ಸರ್ಕಾರವೇ ಅವರ ಜಯಂತಿ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಜನಮಾನಸದಲ್ಲಿ ಇಂದಿಗೂ ಮೇರುನಟರಾಗಿ ಅಚ್ಚಳಿಯದೆ ಉಳಿದಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಒಲವು ಹೊಂದಿದ್ದರಲ್ಲದೆ, ಖ್ಯಾತ ನಟನಾಗಿದ್ದರೂ ಸರಳ ಜೀವನ ನಡೆಸಿ ಆದರ್ಶಪ್ರಾಯವಾಗಿದ್ದಾರೆ ಎಂದರು.

ಎಲ್ಲ ನಟರಿಗೂ ಪ್ರೇರಣೆ

ಚಲನಚಿತ್ರ ಖ್ಯಾತ ಕಲಾವಿದೆ ಪ್ರತಿಮಾ ನಾಯಕ್​ ಮಾತನಾಡಿ, ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲದಿದ್ದರೂ ಅಭಿಜಾತ ಕಲಾ ಪ್ರತಿಭೆಯಿಂದಾಗಿ ಡಾಕ್ಟರೇಟ್​ ಪದವಿ ಗಳಿಸಿದರು. ಅವರ ಜೀವನವೇ ಒಂದು ದಂತಕಥೆ. ಅವರ ನಟನೆಗೆ ಮನಸೋಲದ ಜನರೇ ಇಲ್ಲ. ತಂದೆಯಂತೆಯೇ ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ತಮ್ಮ ನಟನಾ ಜೀವನ ಆರಂಭಿಸಿದರು. 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಭಕ್ತಿ ಪ್ರಧಾನ ಹಾಗೂ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದಲ್ಲದೆ ಈವರೆಗಿನ ಹಾಗೂ ಮುಂದಿನ ಎಲ್ಲ ನಟರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ಲಯನ್ಸ್​ ಮಿಡ್​ಟೌನ್​ ಅಧ್ಯಕ್ಷ ಪುರುಷೋತ್ತಮ್​ ನಾಯಕ್​, ಡಾ. ಜಿ.ಶಂಕರ್​ ಮಹಿಳಾ ಪ್ರಥಮ ದರ್ಜೆ ಕಾಲೇಜ್​ನ ಪ್ರಾಂಶುಪಾಲೆ ಡಾ.ನಿಕೇತನಾ, ವಾರ್ತಾ ಇಲಾಖೆಯ ಸಿಬ್ಬಂದಿ, ರೆಡ್​ಕ್ರಾಸ್​ ಹಾಗೂ ಡಿಡಿಆರ್​ಸಿ ಸಿಬ್ಬಂದಿ, ವಿವಿಧ ಕಾಲೇಜ್​ಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರದ ಅತ್ಯುನ್ನತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯಿಂದ ದೊರೆತ ಹಣವನ್ನು ಕನ್ನಡ ಸಾಹಿತ್ಯ ಪರಿಷತ್​ಗೆ ದೇಣಿಗೆ ನೀಡುವ ಮೂಲಕ ತಮ್ಮ ಕನ್ನಡಪ್ರೇಮವನ್ನು ಜಗಜ್ಜಾಹೀರು ಮಾಡಿದ್ದಾರೆ ಎಂದರು.
ಡಾ. ಜಿ.ಶಂಕರ್​ ಮಹಿಳಾ ಪ್ರಥಮ ದರ್ಜೆ ಕಾಲೇಜ್​ನ ವಿದ್ಯಾರ್ಥಿನಿಯರಾದ ದಿಶಾ ಮತ್ತು ದಿಯಾ ಡಾ.ರಾಜ್​ ಕುಮಾರ್​ ಅವರ ಚಿತ್ರಗಿತೆಗಳನ್ನು ಹಾಡಿದರು. ರೆಡ್​ಕ್ರಾಸ್​ ಉಡುಪಿ ಘಟಕದ ಕಾರ್ಯದರ್ಶಿ ಡಾ. ಗಣನಾಥ್​ ಶೆಟ್ಟಿ ಎಕ್ಕಾರ್​ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ರಮಾದೇವಿ ವಂದಿಸಿದರು.
"

ಕನ್ನಡದ ವರನಟ ಡಾ.ರಾಜ್​ಕುಮಾರ್​ ಜಯಂತಿ ಅಪರೂಪದ ಕಾರ್ಯಕ್ರಮ. ಓರ್ವ ಚಿತ್ರನಟನ ಜಯಂತಿಯನ್ನು ಸರ್ಕಾರವೇ ಆಚರಿಸುವುದು ದೇಶದಲ್ಲೇ ಅತ್ಯಂತ ಅಪೂರ್ವ. ಅವರು ನಟರಷ್ಟೇ ಅಲ್ಲ, ಸರಳ-ಸಜ್ಜನ ವ್ಯಕ್ತಿ. ಅವರು ಬದುಕಿದ ರೀತಿ ಅನುಕರಣೀಯ. ಡಾ. ರಾಜ್​ ಜಯಂತಿ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣ.