ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಮೋದ್ ಮಧ್ವರಾಜ್ ಮಾತನಾಡಿದರು. 
ಉಡುಪಿ

ಪಾಸ್ ಸಿಗದಿರಲು ಪುತ್ತಿಗೆ ಮಠ, ಬಿಜೆಪಿ ಕಾರಣವಲ್ಲ: ಪ್ರಮೋದ್ ಮಧ್ವರಾಜ್

ಉಡುಪಿ: ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ನಾನು ಸೇವೆ ರೂಪದಲ್ಲಿ ಸ್ವರ್ಣ ಕವಚವನ್ನು ಸಮರ್ಪಿಸಿದ್ದೇನೆ. ಇದನ್ನು ಪ್ರಧಾನಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ದೂರುದಲ್ಲಿ ನಿಂತು ನೋಡುವ ಆಸೆ ನನಗೆ ಇತ್ತು. ಕಾರಣಾಂತರಗಳಿಂದ ಅದು ತಪ್ಪಿ ಹೋಗಿದೆ. ಅದರ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ. ಶ್ರೀ ಪುತ್ತಿಗೆ ಮಠವಾಗಲಿ ಅಥವಾ ಜಿಲ್ಲಾ ಬಿಜೆಪಿ ಆಗಲಿ ನನಗೆ ಕಾರ್ಯಕ್ರಮದಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣಕರ್ತರಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದನ್ನು ಯಾರು ತಪ್ಪಿಸಿದ್ದರೆ ಅಂತಾ ನನಗೆ ಗೊತ್ತಿಲ್ಲ. ಯಾರಾದರೂ ತಪ್ಪಿಸಿದ್ದರೆ ಅದು ಅವರ ರಾಜಕೀಯ ತಪ್ಪು ಹೆಜ್ಜೆ ಎಂದು ಟಾಂಗ್ ನೀಡಿದರು.
ಯಾರ ಮೇಲೂ ನಾನು ಗೂಬೆ ಕೂರಿಸುವ ಪ್ರಯತ್ನ ಮಾಡುವುದಿಲ್ಲ. ಯಾರನ್ನೂ ಟೀಕೆ ಮಾಡುವುದಿಲ್ಲ. ನನ್ನ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ಅತ್ಯಂತ ಖುಷಿ ಕೊಟ್ಟಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಠದವರು ಮತ್ತು ನಾವು ಕಳಿಸಿದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಇತ್ತು. ಆದರೆ ಪ್ರಧಾನಿ ಕಛೇರಿಯಿಂದ ಪಟ್ಟಿಯನ್ನು ಪರಿಷ್ಕೃತಗೊಳಿಸಿ ಕಳಿಸುವಾಗ ಪ್ರಮೋದ್ ಮಧ್ವರಾಜ್ ಅವರ ಹೆಸರು ಇರಲಿಲ್ಲ. ಜೊತೆಗೆ ಹಲವರ ಹೆಸರು ಇರಲಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಲು ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್‌ ಮಧ್ವರಾಜ್ ಬೆರೆತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ್ ಶೆಟ್ಟಿ, ಶ್ರೀಕಾಂತ್ ನಾಯಕ್, ದಿವಾಕರ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.